ಬೆಂಗಳೂರು: 'ಉತ್ತರ ಕೊಡಿ ಬಿಎಸ್ವೈ' ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಟ್ವೀಟ್ ಅಭಿಯಾನ ಆರಂಭಿಸಿದೆ. ರಾಜ್ಯ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ವಿಚಾರವಾಗಿ ತಳೆದಿರುವ ನಿಲುವು ಹಾಗೂ ಬಿಜೆಪಿ ನಾಯಕರು ಮಾಡುತ್ತಿರುವ ಆರೋಪಗಳನ್ನು ಕಾಂಗ್ರೆಸ್ ಖಂಡಿಸಿ, ಟ್ವೀಟ್ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಿದೆ.
ಅಲ್ಲದೆ ಸರ್ಕಾರ ರಾಜ್ಯದ ಅಭಿವೃದ್ಧಿ ಹಾಗೂ ಅಗತ್ಯ ಸೌಕರ್ಯಗಳ ನೀಡಿಕೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದು, ವಿವಿಧ ಕಾರ್ಯಗಳ ಪ್ರಗತಿ ಏನಾಗಿದೆ ಎಂದು ಪ್ರಶ್ನೆ ಹಾಕಿದೆ. ನಾಡಿನ ಸಾಕ್ಷಿಪ್ರಜ್ಞೆ, ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕ್ರಮ ಕೈಗೊಂಡು, ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸುವ ಇಚ್ಛಾಶಕ್ತಿ ನಿಮ್ಮ ಸರ್ಕಾರಕ್ಕಿಲ್ಲ ಏಕೆ? ಎಂದು ಪ್ರಶ್ನಿಸಿದೆ.
ಟ್ವಿಟರ್ ಖಾತೆಯ ಪ್ರೊಫೈಲ್ಗೆ ದೊರೆಸ್ವಾಮಿ ಅವರ ಭಾವಚಿತ್ರವನ್ನೇ ಬಳಸುವ ಮೂಲಕ ಕಾಂಗ್ರೆಸ್ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ. ಸಮಾಜದ ಶಾಂತಿ ಕದಡುವಂತಹ ಪ್ರಚೋದನಕಾರಿ ದ್ವೇಷ ಭಾಷಣ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಹಿರಿಯ ನಾಯಕರಾದ ಬಿ ಎಲ್ ಸಂತೋಷ್, ಸಚಿವರಾದ ಸಿಟಿ ರವಿ, ಬಿಆರ್ ಪಾಟೀಲ್, ಡಾಕ್ಟರ್ ಅಶ್ವತ್ ನಾರಾಯಣ್, ಸೋಮಶೇಖರ ರೆಡ್ಡಿ ಸೇರಿದಂತೆ ಇತರೆ ಯಾರ ವಿರುದ್ಧವೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಏಕೆ? ಎಂದು ಕೇಳಿದೆ.
ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲವೇಕೆ?
ನೆರೆ ಪರಿಹಾರಕ್ಕೆ ಕೇಂದ್ರದಿಂದ ನೀವು ಕೇಳಿದ ಹಣವೆಷ್ಟು ? ಅವರು ಕೊಟ್ಟಿದ್ದೆಷ್ಟು? ಮತ್ತೆ ಏಕೆ ತಾವು ಒತ್ತಡ ಹೇರಿ ಹಣ ತರುತ್ತಿಲ್ಲ. ಈ ವಿಷಯದಲ್ಲಿ ಇಪ್ಪತ್ತೈದು ಸಂಸದರು ನಾಪತ್ತೆ ಏಕೆ ? ಹಿಂದಿನ ಸರ್ಕಾರಗಳ ಜನಪರ ಯೋಜನೆಗಳಾದ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸುವ ಪ್ರಯತ್ನ, ಅನ್ನಭಾಗ್ಯ ಅಕ್ಕಿ ಕಡಿತ, ವಸತಿ ಯೋಜನೆಗಳ ನಿರ್ಲಕ್ಷ್ಯ, ರೈತರ ಸಾಲದ ಕಂತುಗಳನ್ನು ಸಕಾಲಕ್ಕೆ ಪಾವತಿಸದಿರುವುದು, ಈ ರೀತಿಯ ಕೀಳು ಮಟ್ಟದ ದ್ವೇಷ ರಾಜಕಾರಣ ಏಕೆ? ಎಂದಿದೆ.
ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಬಾಕಿ, ನರೇಗಾ ಹಾಗೂ ವಿವಿಧ ಯೋಜನೆಗಳ ಹಣ ಸೇರಿದಂತೆ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಸಾವಿರಾರು ಕೋಟಿ ಬಾಕಿ ಹಣವನ್ನು ನೀಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುತ್ತಿಲ್ಲ ಏಕೆ? ಸಿ.ಎ.ಎ/ಎನ್.ಆರ್.ಸಿ ವಿರೋಧಿಸಿ ರಾಜ್ಯದಲ್ಲಿ ಶಾಂತಿಯುತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದಾಗ ಅನಗತ್ಯವಾಗಿ ರಾಜ್ಯಾದ್ಯಂತ ನಿಷೇಧಾಜ್ಞೆ (144) ಹೇರಿದ್ದು ಏಕೆ? ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ಬಾಬರಿ ಮಸೀದಿ ಧ್ವಂಸದ ಪ್ರದರ್ಶನ ನಡೆಸಿದರೂ ಯಾವುದೇ ಕ್ರಮವಿಲ್ಲ, ಆದರೆ, ಶಾಸಕ ಯುಟಿ ಖಾದರ್, ಶಾಹಿನ್ ಶಾಲೆಯಲ್ಲಿ ನಾಟಕ ಪ್ರದರ್ಶಿಸಿದ ಮಕ್ಕಳು, ಶಿಕ್ಷಕರು, ಪಾಲಕರ ವಿರುದ್ಧವು ದೇಶದ್ರೊಹ ಪ್ರಕರಣ ದಾಖಲಿಸಿದ್ದು ಏಕೆ?.
ಪ್ರವಾಹ ಪೀಡಿತರಿಗೆ ಪರಿಹಾರವಿಲ್ಲ. ಭೀಕರ ನೆರೆ ಹಾವಳಿಗೆ ತುತ್ತಾದ ಪ್ರದೇಶಗಳಲ್ಲಿ ಇದುವರೆಗೂ ನೆರೆ ಪರಿಹಾರ, ಪುನರ್ವಸತಿ, ನಷ್ಟ ಪರಿಹಾರ ಕಾರ್ಯಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ ಏಕೆ? ರಾಜ್ಯದಾದ್ಯಂತ ಸ್ವಯಂಪ್ರೇರಿತವಾಗಿ ವಿದ್ಯಾರ್ಥಿ - ಯುವಜನರು, ಸಾಮಾಜಿಕ ಹೋರಾಟಗಾರರು, ಕವಿ ಸಾಹಿತಿಗಳು, ಸಾಮಾನ್ಯ ಜನರು ಬೀದಿಗಿಳಿದು ಪ್ರತಿಭಟನೆ, ಹೋರಾಟಗಳು ನಡೆದರೂ ಈ ಜನಾಭಿಪ್ರಾಯವನ್ನು ಗೌರವಿಸಿ ರಾಜ್ಯದಲ್ಲಿ ಎನ್.ಆರ್.ಸಿ/ಸಿಎಎ/ಎನ್.ಪಿ.ಆರ್ ಜಾರಿ ಮಾಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿಲ್ಲ ಏಕೆ? ಮಂಗಳೂರು ಗಲಭೆ ಮತ್ತು ಗೋಲಿಬಾರ್, ಶೃಂಗೇರಿ ಸಾಹಿತ್ಯ ಸಮ್ಮೇಳನಕ್ಕೆ ಬಾಂಬ್ ಬೆದರಿಕೆ, ಶಾಸಕರ ಹತ್ಯೆ ಯತ್ನ, ಬೆಂಗಳೂರಿನ ಜೋತಿ ನಿವಾಸ್ ಕಾಲೇಜು ಪ್ರಕರಣ, ಪ್ರಮುಖ ವ್ಯಕ್ತಿಗಳಿಗೆ ಜೀವ ಬೆದರಿಕೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದು ನಿಮ್ಮ ವೈಫಲ್ಯವಲ್ಲವೇ? ಎಂದು ಕೇಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.