ರಾಮನಗರ:ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ ನಾಯಕರು ಹಿಂದೆ ಸರಿದಿದ್ದಾರೆ. ಕೇವಲ ಐದೇ ದಿನಕ್ಕೆ ಪಾದಯಾತ್ರೆ ಕೊನೆಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ. ರಾಮನಗರ ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಮಹತ್ವ ಸಭೆ ನಡೆಸಿ, ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆ ಸದ್ಯಕ್ಕೆ ಕೈ ಬಿಟ್ಟಿದ್ದೇವೆ ಅಷ್ಟೇ, ಮುಂದಿನ ದಿನಗಳಲ್ಲಿ ಮೇಕೆದಾಟು ಪಾದಯಾತ್ರೆ ಮಾಡೇ ಮಾಡುತ್ತೇವೆ. ರಾಮನಗರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತೇವೆ. ಸರ್ಕಾರದ ಬೆದರಿಕೆಯಿಂದ ಪಾದಯಾತ್ರೆ ವಾಪಸ್ ಪಡೆಯುತ್ತಿಲ್ಲ. ನಮಗೆ ರಾಜ್ಯದ ಜನರ ಹಿತ ಕೂಡ ಮುಖ್ಯವಾಗಿದೆ. ಜನರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಹಿಂದಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಕೊರೊನಾ ಹೆಚ್ಚಾಗಲು ಬಿಜೆಪಿ ಕಾರಣ:ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ತಗುಲಿದೆ. ಮೇಕೆದಾಟು ಯೋಜನೆಗೆ ಬಹಳ ಉತ್ಸಾಹದಿಂದ ಭಾಗವಹಿಸಿದ್ದೀರಿ. ಪಾದಯಾತ್ರೆಗೆ ಬಹಳ ಅಭೂತಪೂರ್ವ ಯಶಸ್ಸು ಬಂದಿದೆ.
ಕೊರೊನಾ ಹೆಚ್ಚಾಗಲು ಕಾಂಗ್ರೆಸ್ ಕಾರಣ ಅಲ್ಲ. ಕೊರೊನಾ 3ನೇ ಅಲೆ ಸ್ಫೋಟಕ್ಕೆ ಕಾಂಗ್ರೆಸ್ ಕಾರಣವಲ್ಲ. ಬಿಜೆಪಿಯೇ ಕೊರೊನಾ ಹೆಚ್ಚಾಗಲು ಕಾರಣ. ಕೊರೊನಾ 3ನೇ ಅಲೆ ಶುರುವಾದರೂ ಸಿಎಂ ಯಾವ ಸಭೆಯನ್ನೂ ನಿಲ್ಲಿಸಲಿಲ್ಲ. ನೂತನ ಎಂಎಲ್ಸಿ ಪ್ರಮಾಣವಚನ ಸ್ವೀಕಾರ ಸಮಾರಂಭ ಮಾಡಿದರು. ಮೂರರಿಂದ ನಾಲ್ಕು ಸಾವಿರ ಜನ ಸೇರಿಸಿದ್ದರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.