ಬೆಂಗಳೂರು: 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ನಾಗರಿಕಾ ಸೇವಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಹಾಗೂ ದೇಶದಲ್ಲಿ 115ನೇ ಸ್ಥಾನ ಪಡೆದಿರುವ ಕನಕಪುರದ ಯತೀಶ್. ಆರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಕನಕಪುರದ ಯತೀಶ್.ಆರ್ ಅವರು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ, ನಮ್ಮ ತಾಲೂಕು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಭವಿಷ್ಯದಲ್ಲಿ ದೇಶ ಸೇವೆಯ ಅಮೂಲ್ಯ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಜನರ ಹಿತಕ್ಕಾಗಿ ಶ್ರಮಿಸಲಿ ಎಂದು ಅವರು ಹಾರೈಸಿದ್ದಾರೆ.
ಮೂಲತಃ ಇಂಜಿನಿಯರ್ ಪದವಿ ಮಾಡಿರುವ ಯತೀಶ್ 2017 ರಿಂದ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು ಎಂದು ತಿಳಿಯಿತು. ಅವರ ಸುದೀರ್ಘ ಪರಿಶ್ರಮಕ್ಕೆ ಈಗ ತಕ್ಕ ಪ್ರತಿಫಲ ಸಿಕ್ಕಿದೆ. ಅವರ ಮುಂದಿನ ವೃತ್ತಿ ಜೀವನ ಯಶಸ್ವಿಯಾಗಲಿ. ಅವರ ಸೇವೆಯಿಂದ ಜನರಿಗೆ ಒಳಿತಾಗಲಿ.
ಯತೀಶ್ ಅವರ ಸಾಧನೆ ಯುವ ಸಮುದಾಯಕ್ಕೆ ಸ್ಪೂರ್ತಿ ತಂದಿದೆ. ಇವರಿಂದ ಮತ್ತಷ್ಟು ಯುವಕರು ಪ್ರೇರಿತರಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಲಿ. ರಾಜ್ಯ ಹಾಗೂ ದೇಶಕ್ಕೆ ಉತ್ತಮ ಹೆಸರು ತರಲಿ ಎಂದು ಡಿಕೆಶಿ ಹಾರೈಸಿದ್ದಾರೆ.