ಬೆಂಗಳೂರು: ಹೂಡಿಕೆಯಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಹಿಂದೆ ವ್ಯವಹಾರಾತ್ಮಕವಾಗಿ ಬಂಡವಾಳ ಹಿಂತೆಗೆದುಕೊಂಡ ಕಂಪನಿಗಳು ಈಗ ಮರು ಹೂಡಿಕೆ ಮಾಡಿ ಷೇರುದಾರರಿಗೆ ಉತ್ತಮ ಆದಾಯ ನೀಡುತ್ತಿವೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಬೆಂಗಳೂರಿನ ಭಾರತೀಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ ಮಾರುಕಟ್ಟೆಗಳ ಮೂಲಕ ಸಂಪತ್ತಿನ ಸೃಷ್ಟಿ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಈಗ ಹೂಡಿಕೆ ಹಿಂಪಡೆಯುವಿಕೆಯ ತತ್ತ್ವವೆಂದರೆ ಘಟಕವನ್ನು ಸ್ಥಗಿತಗೊಳಿಸುವುದಲ್ಲ, ಅದನ್ನು ಉತ್ತಮಗೊಳಿಸುವುದು ಮತ್ತು ಪರಿಣಾಮಕಾರಿಯಾಗಿ ನಡೆಸುವುದಾಗಿದೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಬಹಳಷ್ಟು ಸ್ಟಾರ್ಟ್ ಅಪ್‌ಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದೊಂದಿಗೆ ಪಾಲುದಾರಿಕೆ ಮತ್ತು ಕೊಡುಗೆಗೆ ಆಸಕ್ತಿ ತೋರಿಸುತ್ತಿವೆ ಎಂದು ಹೇಳಿದರು.