ಬೆಂಗಳೂರು: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಅವರ ಪತ್ನಿ ಸೇರಿ 13 ಜನರ ಅಗಲಿಕೆಗೆ ರಾಜ್ಯ ಕಾಂಗ್ರೆಸ್ ನಾಯಕರು ಸಂತಾಪ ಸೂಚಿಸಿದರು.
'ಹೆಲಿಕಾಪ್ಟರ್ ಅಪಘಾತದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರೆ ಜನರ ದುರದೃಷ್ಟಕರ ನಿಧನದಿಂದ ದುಃಖವಾಗಿದೆ. ಇದು ನಮ್ಮ ದೇಶ ಮತ್ತು ಭಾರತದ ರಕ್ಷಣೆಗೆ ದೊಡ್ಡ ನಷ್ಟ. ಮೃತರ ಕುಟುಂಬಗಳಿಗೆ ಮತ್ತು ಹಿತೈಷಿಗಳಿಗೆ ನನ್ನ ಸಂತಾಪ.'
- ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ, ವಿಧಾನಸಭೆ
'ಸೇನಾಪಡೆಗಳ ಮುಖ್ಯಸ್ಥರಾದ (ಸಿಡಿಎಸ್) ಬಿಪಿನ್ ರಾವತ್, ಅವರ ಕುಟುಂಬದವರು ಹಾಗೂ ಸಿಬ್ಬಂದಿ ಸೇರಿ 12 ಮಂದಿ ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿರುವುದು ಮನಸ್ಸಿಗೆ ನೋವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಶೀಘ್ರ ಗುಣಮುಖರಾಗಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.'
- ಡಿ.ಕೆ.ಶಿವಕುಮಾರ್,ಕೆಪಿಸಿಸಿ ಅಧ್ಯಕ್ಷ
'ತಮಿಳುನಾಡಿನಲ್ಲಾದ ಸೇನಾ ಹೆಲಿಕಾಪ್ಟರ್ ಅಪಘಾತ ಅತ್ಯಂತ ಆಘಾತಕಾರಿ ಮತ್ತು ನೋವಿನ ವಿಚಾರವಾಗಿದೆ. ದುರಂತದಲ್ಲಿ ಮೃತರಾದ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ ಇನ್ನುಳಿದ ಸಹಪ್ರಯಾಣಿಕರ ಸಾವಿಗೆ ತೀವ್ರ ಸಂತಾಪ ಸೂಚಿಸುತ್ತೇನೆ.'
- ಡಿ.ಕೆ. ಸುರೇಶ್,ಸಂಸದ
ಮಾಜಿ ಸಚಿವ ಡಾ. ಎಚ್.ಸಿ. ಮಹದೇವಪ್ಪ, ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಸೇರಿದಂತೆ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್- ಜೆಜೆಪಿಯಿಂದ ಪ್ರತ್ಯೇಕ ನಮನ:
ಭಾರತದ ಮೂರು ರಕ್ಷಣಾ ಇಲಾಖೆಯ ಮುಖ್ಯಸ್ಥರಾದ ಬಿಪಿನ್ ರಾವತ್ ಅವರ ನಿಧನಕ್ಕೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪತ್ಯೇಕವಾಗಿ ನಮನ ಸಲ್ಲಿಸಿವೆ. ಶಿವಮೊಗ್ಗದ ಗೋಪಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಾವತ್ ಅವರ ಭಾವಚಿತ್ರದ ಮುಂದೆ ಮೇಣದ ಬತ್ತಿ ಹಿಡಿದು ಗೌರವ ನಮನ ಸಲ್ಲಿಸಲಾಯಿತು. ಈ ವೇಳೆ ರಾವತ್ ಅಮರ್ ರಹೇ ಎಂದು ಘೋಷಣೆ ಕೂಗಿದರು. ಅದೇ ರೀತಿ ಯುವ ಕಾಂಗ್ರೆಸ್ ವತಿಯಿಂದ ನಗರದ ಶಿವಪ್ಪ ನಾಯಕ ವೃತ್ತದಲ್ಲಿ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ರಾಮನಗರದಲ್ಲಿ ಸಹ ಭಗತ್ ಸಿಂಗ್ ಸೇನೆ ವತಿಯಿಂದ KSRTC ಬಸ್ ನಿಲ್ದಾಣದ ಬಳಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಹುತಾತ್ಮರಾದ ವೀರ ಯೋಧರಿಗೆ ಮೇಣದ ಭತ್ತಿ ಹಿಡಿದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
'ಬಿಪಿನ್ ರಾವತ್ ಮತ್ತು ಅವರ ಪತ್ನಿ ಹಾಗೂ ಸಿಬ್ಬಂದಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿರುವುದು ಅಪಾರ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ನೋವು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.'
- ಎಸ್.ಟಿ. ಸೋಮಶೇಖರ್, ಸಚಿವ