ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ವತಿಯಿಂದ ನಡೆದ ಸರ್ ಎಂ. ವಿಶ್ವೇಶ್ವರಯ್ಯ ಶ್ರೇಷ್ಠ ಉತ್ಪಾದನಾ ಪ್ರಶಸ್ತಿ ಮತ್ತು ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದಗೌಡ ಹಾಗೂ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡಿದ್ರು.
ಉತ್ಪಾದನಾ ಸಾಮರ್ಥ್ಯವನ್ನು ಉತ್ತೇಜಿಸುವುದು ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ 2017-18ನೇ ಸಾಲಿನಿಂದ ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ನೀಡುವ ಹೊಸ ಯೋಜನೆಯನ್ನ ಘೋಷಿಸಲಾಗಿತ್ತು. ಅದರಂತೆ ಈ ಬಾರಿ 25 ಜಿಲ್ಲೆಗಳಿಂದ ವಿವಿಧ ವರ್ಗಗಳ ಪ್ರಶಸ್ತಿಗಳಿಗೆ 171 ಅರ್ಜಿಗಳನ್ನು ಸ್ವೀಕರಿಲಾಗಿದೆ. ಅದರಲ್ಲಿ ಒಟ್ಟು 47 ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ಸಮಗ್ರ-4, ವಲಯವಾರು- 13, ಜಿಲ್ಲಾವಾರು- 24, ಮಹಿಳಾ- 2, ಪರಿಶಿಷ್ಟ ಜಾತಿ ಮತ್ತು ಪಂಗಡ- 2, ಅಲ್ಪಸಂಖ್ಯಾತ- 2 ಸೇರಿದಂತೆ ಒಟ್ಟು 47 ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ.
ಇನ್ನು, ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಾಗಿ ಒಟ್ಟು 63 ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲಾಗಿದೆ. ತೋಟಗಾರಿಕೆ ಸರಕುಗಳು, ಸಂಸ್ಕರಿಸಿದ ಆಹಾರ, ರಾಸಾಯನಿಕ ಮತ್ತು ಪ್ಲಾಸ್ಟಿಕ್, ಸಾಗರ ಉತ್ಪನ್ನಗಳು ಸೇರಿದಂತೆ ಒಟ್ಟು 16 ಉತ್ಪನ್ನ ವಿಭಾಗಗಳಿಗೆ ರಫ್ತು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತಾನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ರಫ್ತಿನಲ್ಲಿ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ಸಮಗ್ರ ನೂತನ ಕೈಗಾರಿಕಾ ನೀತಿಯನ್ನು ಶೀಘ್ರದಲ್ಲೇ ಜಾರಿಗೊಳಿಸುತ್ತೇವೆ. ಅದಕ್ಕೆ ಸಲಹೆಗಳನ್ನ ನೀಡಬೇಕು ಅಂತ ಕೈಗಾರಿಕೋದ್ಯಮಿಗಳಿಗೆ ಮನವಿ ಮಾಡಿದರು.