ಬೆಂಗಳೂರು:ಬೆಂಗಳೂರು ವಿವಿಯ ಸಂಶೋಧನಾ ವಿದ್ಯಾರ್ಥಿಗಳ ವಿರುದ್ಧ ವಿವಿಯ ಅಧಿಕಾರಿಗಳೇ ದೂರು ನೀಡಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಾದ ಲೋಕೇಶ್ ಹಾಗೂ ಸತೀಶ್ ಮತ್ತು ಇತರರು ವಿವಿಯ ಹಣಕಾಸು ಅಧಿಕಾರಿ ಜಯಲಕ್ಷ್ಮಿ ಅವರನ್ನ ಸುತ್ತುವರಿದು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿನ್ನೆ(ಶುಕ್ರವಾರ) ಬೆಳಗ್ಗೆ 11.20ರ ಸಮಯದಲ್ಲಿ ನನ್ನ ಕಚೇರಿಗೆ ಸಂಶೋಧನಾ ವಿದ್ಯಾರ್ಥಿಗಳಾದ ಲೋಕೇಶ್ ಹಾಗೂ ಸತೀಶ್ ಮತ್ತು ಇತರರೊಂದಿಗೆ ಸುಮಾರು 50 ಮಂದಿ ಏಕಾಏಕಿ ಕಚೇರಿ ಒಳಗೆ ನುಗ್ಗಿ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಹಣಕಾಸು ಅಧಿಕಾರಿ ಜಯಲಕ್ಷ್ಮಿ ದೂರು ನೀಡಿದ್ದಾರೆ.
ಹಣಕಾಸು ಅಧಿಕಾರಿಯೊಂದಿಗೆ ವಾಗ್ವಾದ ನಡೆಸುತ್ತಿರುವ ಸಂಶೋಧನಾ ವಿದ್ಯಾರ್ಥಿಗಳು 'ನೀನು ಕೆಲಸ ಮಾಡಲು ಅನರ್ಹಳು, ನೀನು ಕುರ್ಚಿಯಿಂದ ಎದ್ದೇಳು' ಎಂದು ಏರುಧ್ವನಿಯಲ್ಲಿ ಮಾತಾಡಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯದ ಕುಲಪತಿಯವರನ್ನು ಅವನು ಎಂದು ಏಕವಚನದಲ್ಲಿ ಮೂದಲಿಸುತ್ತಾ, ನೀವು ಈ ಸೀಟ್ನಲ್ಲಿ ಇರಬಾರದು. ನೀನು ಕೆಲಸ ಮಾಡಬೇಕಾದ ಜಾಗ ಇದಲ್ಲ, ಎದ್ದು ಹೋಗು ಆಚೆಗೆ. ಕಳ್ಳತನ ಮಾಡು. ಕಮಿಷನ್ ಆಸೆಗೆ ಕೆಲಸ ಮಾಡುತ್ತಿರುವ ಎಫ್ಒಗೆ ಧಿಕ್ಕಾರ ಎಂದು ಕೂಗಾಡಿದ್ದಾರೆ.
ವಿಶ್ವವಿದ್ಯಾಲಯದ ಆಡಳಿತ ವರ್ಗದ ಕುರಿತು, ವಿದ್ಯಾರ್ಥಿಗಳಿಗೆ ಸಂಬಂಧಪಡದ ವಿಚಾರವನ್ನು ಎತ್ತಿಕೊಂಡು ಒಬ್ಬ ಮಹಿಳಾ ಹಿರಿಯ ಅಧಿಕಾರಿ ಎಂದು ನೋಡದೆ, ಅತಿ ಕೀಳುಮಟ್ಟದಲ್ಲಿ ನಡೆದುಕೊಂಡಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಈ ರೀತಿಯ ಘಟನೆಯು ಮೂರನೇ ಬಾರಿ ನಡೆಯುತ್ತಿದ್ದು, ಕೆಲಸಕ್ಕೆ ಅಡ್ಡಿ ಪಡಿಸಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಈ ಹಿನ್ನೆಲೆ ಸಂಶೋಧನಾ ವಿದ್ಯಾರ್ಥಿಗಳಾದ ಲೋಕೇಶ್, ಸತೀಶ್ ಮತ್ತು ಇತರರು ಮೇಲೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವುದಕ್ಕೆ ಹಾಗೂ ಒಬ್ಬ ಮಹಿಳಾ ಶಾಸನಬದ್ಧ ಅಧಿಕಾರಿಯನ್ನು ಏಕವಚನದಲ್ಲಿ ನಿಂದಿಸಿರುವುದಕ್ಕೆ ಐಪಿಸಿ ಮತ್ತು ಇತರೆ ಕಾನೂನುಗಳ ಅನ್ವಯ ಶೀಘ್ರ ಕ್ರಮವಹಿಸಲು ಕೋರಿದ್ದಾರೆ.
ಈ ಸಂಬಂಧ ವಿದ್ಯಾರ್ಥಿಗಳು ನನ್ನ ಮೇಲೆ ನಡೆಸಿರುವ ಈ ದೌರ್ಜನ್ಯದ ಕುರಿತ ವಿಡಿಯೋ ತುಣುಕನ್ನು ಸಹ ಪರಿಶೀಲಿಸಬಹುದಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ರಾಜ್ಯ ಮಹಿಳಾ ಆಯೋಗ ಮತ್ತು ಕೇಂದ್ರ ಮಹಿಳಾ ಆಯೋಗ ಮತ್ತು ಮಾನವ ಹಕ್ಕು ಆಯೋಗಕ್ಕೂ ಸಹ ದೂರನ್ನು ದಾಖಲಿಸುವುದಾಗಿ ಅವರು ಹೇಳಿದ್ದಾರೆ.
ಮುಷ್ಕರ ನಡೆಸಿದ ಸಂಶೋಧನಾ ವಿದ್ಯಾರ್ಥಿಗಳು: 28 ಕೋಟಿ ರೂಪಾಯಿ ಮೊತ್ತದ ಬಿಲ್ಗೆ ಮೇ 26ರ ರಾತ್ರಿ ಅನುಮೋದನೆ ಕೊಟ್ಟಿದ್ದಾರೆ. ಸಿಂಡಿಕೇಟ್ ಸಭೆ ಮಾಡದೇ, ಚರ್ಚಿಸದೆ ಅನುಮೋದನೆ ಪಡೆದುಕೊಂಡಿದ್ದಾರೆ. ಈ ಸಂಬಂಧ ನಿನ್ನೆ ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಕೇತರ ವಿದ್ಯಾರ್ಥಿಗಳು ಸೇರಿ ಮುಷ್ಕರ ನಡೆಸಿದ್ದರು. ಜೂನ್ 11ಕ್ಕೆ ಉಪ ಕುಲಪತಿ ವೇಣುಗೋಪಾಲ್ ಅವಧಿ ಮುಕ್ತಾಯವಾಗಲಿದೆ. ಈ ವೇಳೆ ಇಷ್ಟು ದೊಡ್ಡ ಮೊತ್ತ ಅನುಮೋದನೆ ಮಾಡಿಕೊಂಡಿರುವುದನ್ನು ವಿರೋಧಿಸಿ ಬೆಂಗಳೂರು ವಿವಿ ಹಣಕಾಸು ವಿಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಹಣಕಾಸು ಅಧಿಕಾರಿ ವಿವಿ ಬಿಟ್ಟು ತೊಲಗಲಿ ಎಂದು ಘೋಷಣೆ ಕೂಗುತ್ತಾ, ಕಚೇರಿಯಿಂದ ಎಫ್ಓ ಜಯಲಕ್ಷ್ಮಿ ಅವರನ್ನ ಹೊರಗೆ ಕಳುಹಿಸಿದ್ದಾರೆ. ಹೀಗಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ದೂರು ದಾಖಲಾಗಿದೆ.
ಇದನ್ನೂ ಓದಿ:ಹೇಳುವುದು ಒಂದು ಮಾಡುವುದು ಇನ್ನೊಂದು: ಬೆಂಗಳೂರು ವಿವಿ ವಿದ್ಯಾರ್ಥಿಗಳ ಪರದಾಟ