ವೈಟ್ ಫೀಲ್ಡ್ (ಬೆಂಗಳೂರು):ನೈಟ್ ಬೀಟ್ ಮಫ್ತಿಯಲ್ಲಿದ್ದ ಪೊಲೀಸರು ಖಾಸಗಿ ವಾಹನದಲ್ಲಿ ಬಂದು ಬೈಕ್ನಲ್ಲಿ ಹೋಗುತ್ತಿದ್ದ ಹುಡುಗರಲ್ಲಿ ಲಂಚ ಕೇಳಿದ ಆರೋಪ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ. ಮಫ್ತಿಯಲ್ಲಿದ್ದ ಪೊಲೀಸರು ಬೈಕ್ ಅಡ್ಡ ಹಾಕಿದಾಗ ಹುಡುಗರು ಬೈಕ್ ನಿಲ್ಲಿಸದೇ ಬಂದಿದ್ದರು. ಇದಕ್ಕೆ ಪೊಲೀಸರು ಅವರನ್ನು ಹಿಂಬಾಲಿಸಿ ಬಂದು ಹೊಡೆದು ಹಣ ಕೇಳಿರುವುದಾಗಿ ಆರೋಪಿಸಲಾಗಿದೆ.
ಜುಲೈ 26ರ ರಾತ್ರಿ 11.45 ರ ಸಮಯದಲ್ಲಿ ತನ್ನ ಸಹೊದರನನ್ನು ಹೊಫಾರಂನ ಪ್ರಶಾಂತ್ ಬಡಾವಣೆಯ ಮನೆಗೆ ಡ್ರಾಪ್ ಮಾಡಲು ಬರುತ್ತಿದ್ದಾಗ ಮಫ್ತಿಯಲ್ಲಿದ್ದ ನೈಟ್ ಬೀಟ್ನ ವೈಟ್ ಫೀಲ್ಡ್ ಪೊಲೀಸ್ ದತ್ತಾತ್ರೆಯ ಬೈಕ್ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರು ಎಂದು ತಿಳಿಯದೇ ಹೆದರಿಕೊಂದು ಹೋಗಿದ್ದಕ್ಕೆ ಸುಮಾರು ಒಂದು ಕಿ.ಮೀ ದೂರ ಹಿಂಬಾಲಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ನೈಟ್ ಬೀಟ್ ಮಫ್ತಿ ಪೋಲಿಸ್ನಿಂದ ಲಂಚಕ್ಕಾಗಿ ಬೇಡಿಕೆ ಆರೋಪ ಇದರೊಂದಿಗೆ 10 ಸಾವಿರ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರಂತೆ. ಆದರೆ ಅಷ್ಟ ಹಣ ಕೊಡಲಾಗುವುದಿಲ್ಲ ಎಂದಿದ್ದಕ್ಕೆ 5 ಸಾವಿರ ಕೊಡುವಂತೆ ಹೇಳಿದ್ದರು. ಹಣ ಕೊಡದಿದ್ದಲ್ಲಿ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಹೆದರಿದ ಪೋಷಕರು ನಾಳೆ ಠಾಣೆಯಲ್ಲಿ ಕೊಡುವುದಾಗಿ ತಿಳಿಸಿದ್ದಾರೆ. ಪೊಲೀಸ್ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಘಟನೆಯ ನಂತರ ಹಣ ಕೊಡದಿದ್ದಕ್ಕೆ ಆಗಾಗ್ಗೆ ದತ್ತಾತ್ರೆಯ ಎರಡು ದಿನಗಳು ಕಾಲ್ ಮಾಡಿ ಹಿಂಸೆ ಕೊಟ್ಟಿದ್ದಾರೆ. ಇದರಿಂದ ಬೇಸತ್ತು ಸಾಮಾಜಿಕ ಕಾರ್ಯಕರ್ತ ಬೆಳತ್ತೂರು ಪರಮೇಶ್ ಅವರಿಗೆ ವಿಷಯ ತಿಳಿಸಿದಾಗ ಅವರು ಹುಡುಗರ ಪರ ನ್ಯಾಯಕ್ಕಾಗಿ ಹೋರಾಡಲು ಆಡಿಯೋ, ವಿಡಿಯೋ ಸಮೇತ ಎಸಿಬಿಗೆ ದೂರು ದಾಖಲು ಮಾಡಿದ್ದಾರೆ. ನಂತರ ಮೇಲಾಧಿಕಾರಿಗಳಿಗೆ ದತ್ತಾತ್ರೆಯ ವಡ್ಡರ್ ವಿರುದ್ಧ ದೂರನ್ನೂ ನೀಡಿದ್ದಾರೆ. ಆದರೆ ಈ ವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ :ವಾಟರ್ ಕ್ಯಾನ್ ಸಪ್ಲೈ ನೆಪದಲ್ಲಿ ಗಾಂಜಾ ಮಾರಾಟ: ಬೆಂಗಳೂರಲ್ಲಿ ಯುವಕನ ಬಂಧನ