ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ವಕೀಲನ ಮೇಲೆ ಹಲ್ಲೆ ಮಾಡಿದ ಆರೋಪದಡಿ ನೀಡಿದ ದೂರಿನ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಕೀಲ ಸುದರ್ಶನ್ ನೀಡಿದ ದೂರಿನ ಮೇರೆಗೆ ನಾಲ್ವರು ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಆಸಭ್ಯ ವರ್ತನೆ ಹಾಗೂ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಿ ಪ್ರತಿ ದೂರು ದಾಖಲಿಸಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಕೀಲ ಸುದರ್ಶನ್ ದೂರು: ಅಮೃತಹಳ್ಳಿ ಕೆರೆ ಬಳಿಯಿರುವ ಮಾರುತಿ ಬಾರ್ ಮುಂದೆ ನಿಂತಿದ್ದಾಗ ಪೊಲೀಸರು ಹೊಯ್ಸಳ ಹಾಗೂ ಚೀತಾ ವಾಹನದಲ್ಲಿ ಬಂದು ಏಕಾಏಕಿ ನನ್ನ ಮೇಲೆ ಕೈ ಮಾಡಿದ್ದಾರೆ. ಹಾಲೋಬಾಕ್ಸ್ನಿಂದ ತಲೆಗೆ ಹೊಡೆದು ನಂತರ ಕಾಲನ್ನು ಕಲ್ಲಿನಿಂದ ಜಜ್ಜಿ ಕೊಲೆಗೆ ಯತ್ನಿಸಿದ್ದಾರೆ. ಇದನ್ನು ತಡೆಯಲು ಬಂದ ಪತ್ನಿಯ ಕೂದಲು ಎಳೆದು ಹಲ್ಲೆ ಮಾಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಅಮೃತಹಳ್ಳಿ ಠಾಣೆಯಲ್ಲಿ ನಾಲ್ವರು ಪೊಲೀಸರ ವಿರುದ್ಧ ಕೊಲೆ ಯತ್ನ, ಲೈಂಗಿಕ ದೌರ್ಜನ್ಯ ಹಾಗೂ ಅಸಭ್ಯ ವರ್ತನೆಯಡಿ ಎಫ್ಐಆರ್ ದಾಖಲಾಗಿದೆ.