ಬೆಂಗಳೂರು: ವ್ಯಕ್ತಿಯೊಬ್ಬರ ಖಾಸಗಿ ದೂರಿನ ಮೇರೆಗೆ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶರ ವಿರುದ್ಧವೇ ಬಳ್ಳಾರಿ ನ್ಯಾಯಾಲಯ ನಡೆಸುತ್ತಿರುವ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಜೆ. ವಿಜಯ್ ಕುಮಾರ್ ವಿರುದ್ಧ ಬಳ್ಳಾರಿ ನ್ಯಾಯಾಲಯದಲ್ಲಿ ಸಲ್ಲಿಸಿರುವ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವ ಸಂಬಂಧ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರವನ್ನೂ ಪ್ರತಿವಾದಿಯಾಗಿ ಸೇರಿಸಲು ಸೂಚಿಸಿತು. ಹಾಗೆಯೇ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 21ಕ್ಕೆ ಮುಂದೂಡಿತು.
ಪ್ರಕರಣದ ಹಿನ್ನೆಲೆ:ಸ್ಥಳೀಯ ನಿವಾಸಿ ಸಿ.ಎಂ. ಮಂಜುನಾಥ್ ಎಂಬವರನ್ನು ಸಿವಿಲ್ ನ್ಯಾಯಾಧೀಶ ವಿಜಯ್ ಕುಮಾರ್ ಅವರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ವಿಚಾರವಾಗಿ ಮಂಜುನಾಥ್, 2019ರ ಮೇ 25ರಂದು ಸಿವಿಲ್ ನ್ಯಾಯಾಧೀಶರ ವಿರುದ್ಧ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ದೂರು ನೀಡಿದ್ದರು.
ಇದಕ್ಕೆ 2019ರ ಜೂ.13ರಂದು ಉತ್ತರಿಸಿದ್ದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿ, ನ್ಯಾಯಾಂಗ ಪರಿಧಿಯಲ್ಲಿಯೇ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿದ್ದರು. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿದ್ದ ಮಂಜುನಾಥ್, ನ್ಯಾಯಾಧೀಶರ ವಿರುದ್ಧವೇ ಐಪಿಸಿ ಸೆಕ್ಷನ್ 166, 205ಸ 120(ಎ) 211, 219, 499 ಅಡಿ ಕ್ರಿಮಿನಲ್ ಕೇಸ್ ದಾಖಲಿಸಿದ್ದರು.
ದೂರಿನ ಮೇರೆಗೆ ನ್ಯಾಯಾಲಯ ವಿಚಾರಣೆಗೆ ಸಿದ್ದವಾಗಿತ್ತು. ಈ ವಿಚಾರ ಸಿಜೆ ಗಮನಕ್ಕೆ ಬಂದ ಬಳಿಕ ಮಂಜುನಾಥ್ ಪ್ರಕರಣಕ್ಕೆ ಪ್ರತಿಯಾಗಿ ಸಿಆರ್ಪಿಸಿ 482 ಅಡಿ ಸ್ವಯಂಪ್ರೇರಿತ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದೆ.