ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಪಾಲಿಕೆಯ ಸಾವಿರಾರು ಮಂದಿ ಗುತ್ತಿಗೆದಾರರಿಗೆ ಜೇಷ್ಠತೆ ನಿಯಮದಂತೆ ಹಣ ಬಿಡುಗಡೆ ಮಾಡದೇ ಪಾಲಿಕೆಗೆ ಬರುತ್ತಿರುವ ಹಣವನ್ನು ನೇರವಾಗಿ ಸ್ಪೆಷಲ್ ರಿಲೀಸ್ ಅಥವಾ ಕಮಿಷನರ್ ಕೆಟಗೆರಿ ಹೆಸರಿನಲ್ಲಿ ಶೇ.06 ರಷ್ಟು ಕಮಿಷನ್ ಪಡೆದು ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್, ಎಸಿಬಿ ಹಾಗೂ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಮುಖ್ಯ ಆಯುಕ್ತರು, ಬಿಬಿಎಂಪಿಯಲ್ಲಿ ಆರು ತಿಂಗಳಲ್ಲಿ, ಎಪ್ರಿಲ್ -2021 ನಿಂದ ಈವರೆಗೂ 620.52 ಕೋಟಿ ರೂ.ಗಳನ್ನು ಸಾಮಾನ್ಯ ಜೇಷ್ಠತೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗಿದೆ. ಅಲ್ಲದೇ ದಸರಾ ಹಬ್ಬಕ್ಕೂ ಮೊದಲು ಇದೇ ವಾರದಲ್ಲಿ 289 ಕೋಟಿ ರೂ. ಸೇರಿ, ಒಟ್ಟು ಏಪ್ರಿಲ್ ನಿಂದ ಸೆಪ್ಟೆಂಬರ್ ಅಂತ್ಯದೊಳಗೆ 909.52 ಕೋಟಿ ರೂ.ಗಳನ್ನು ಸಾಮಾನ್ಯ ಜೇಷ್ಠತೆಗೆ ಅನುಗುಣವಾಗಿ ಬಿಡುಗಡೆ ಮಾಡಲಾಗುತ್ತದೆ.
ಬಿಬಿಎಂಪಿ ವಿಶೇಷ ಪ್ರಕರಣಗಳಲ್ಲಿ ಆದ್ಯತೆ ಮೇರೆಗೆ ಬಿಲ್ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆರೋಗ್ಯ, ಮದುವೆ, ಸಾವು, ಮತ್ತು ನಿರಂತರವಾಗಿ ನಡೆಯುವ ಕೆಲವು ಮುಖ್ಯ ನಿರ್ವಹಣೆ ಕಾಮಗಾರಿಗಳಿಗೆ ಅವಶ್ಯಕತೆಗೆ ಅನುಗುಣವಾಗಿ ಅಹವಾಲು ಪಡೆದು, ಪರಿಶೀಲಿಸಿ ಆದ್ಯತೆ ಮೇರೆಗೇ ಬಿಲ್ ಪಾವತಿಸಲಾಗಿದೆ.
ಅಲ್ಲದೇ ಕೋವಿಡ್ ಸಂದರ್ಭದಲ್ಲಿ ಚಿತಾಗಾರ, ಆಸ್ಪತ್ರೆ, ಇತರ ಈ ಸಂಬಂಧಿತ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಬಿಲ್ ಪಾವತಿಸಿದ್ದು, ಎನ್.ಆರ್ ರಮೇಶ್ ನೀಡಿರುವ ದೂರು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.