ಬೆಂಗಳೂರು: ಸಿಎಂ ಯಡಿಯೂರಪ್ಪ ಆಡಿಯೋ ಲೀಕ್ ವಿಚಾರವಾಗಿ ಸೂಕ್ತ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಎನ್ ಹನುಮೇಗೌಡ ಎಸಿಬಿ ಹಾಗೂ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅನರ್ಹ ಶಾಸಕರ ಕುರಿತು ಮಾತನಾಡಿರುವ ಆಡಿಯೋ ಭಾರಿ ಸದ್ದು ಮಾಡಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಿಗೆ ಇದು ದೊಡ್ಡ ಅಸ್ತ್ರವಾಗಿದೆ. ಈ ಬೆನ್ನಲ್ಲೇ ಬಿಎಸ್ವೈಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ರಾಜ್ಯಪಾಲರಿಗೆ ಸಲ್ಲಿಸಲಾದ ದೂರಿನ ಪ್ರತಿ ಯಡಿಯೂರಪ್ಪ ಆಡಿಯೋ ಲೀಕ್ ವಿಚಾರವಾಗಿ ಸೂಕ್ತ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಎನ್ ಹನುಮೇಗೌಡ, ಎಸಿಬಿ ಹಾಗೂ ರಾಜ್ಯಪಾಲ ವಜೂಭಾಯಿ ವಾಲಾ ಅವರಿಗೆ ದೂರು ನೀಡಿದ್ದಾರೆ.
ಎಸಿಬಿಗೆ ಸಲ್ಲಿಸಲಾದ ದೂರಿನ ಪ್ರತಿ ದೂರಿನಲ್ಲಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅನರ್ಹ ಶಾಸಕರಿಗೆ ಹಣದ ಆಮಿಷ ಒಡ್ಡಿ ಶಾಸಕರನ್ನ ಖರೀದಿಸಿ ಮುಂಬೈ ಹೋಟೆಲ್ ಒಂದರಲ್ಲಿ ಕೂಡಿಹಾಕಿ ರಕ್ಷಣೆ ಕೊಟ್ಟಿರುವ ಬಗ್ಗೆ ಹುಬ್ಬಳ್ಳಿ ಬಿಜೆಪಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಯಡಿಯೂರಪ್ಪ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಚಾರವೆಸಗಿದ್ದಾರೆ. ಹೀಗಾಗಿ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.