ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳು ಮಾರ್ಚ್ 12ರಿಂದ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪ್ರವೇಶ ಪತ್ರವನ್ನು ಫೆ.28ರಿಂದ http://kea.kar.nic.in ಜಾಲತಾಣದಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ತಿಳಿಸಿದ್ದಾರೆ.
ಪರೀಕ್ಷೆಯು ಮಾರ್ಚ್ 12 ರಿಂದ 16ರವರೆಗೆ ನಡೆಯಲಿದೆ. ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇತ್ತೀಚಿನ 2 ಭಾವಚಿತ್ರ, ಪ್ರವೇಶಪತ್ರ, ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೊಠಡಿಗೆ ಕೆಲ ವಸ್ತುಗಳು ನಿಷಿದ್ಧ: ಪರೀಕ್ಷಾ ಕೊಠಡಿಗೆ ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು (ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂತ್, ಕೈ ಗಡಿಯಾರ/ವಾಚ್), ಆಹಾರ ಪದಾರ್ಥಗಳು, ಸ್ಟೇಷನರಿ ವಸ್ತುಗಳು (ಪೆನ್ಸಿಲ್, ಕಾಗದ, ಎರೇಸರ್, ಇಂಚುಪಟ್ಟಿ, ಜಾಮಿಟ್ರಿ ಪೆಟ್ಟಿಗೆ, ಕ್ಯಾಲ್ಕುಲೇಟರ್, ಲಾಗ್ ಟೇಬಲ್) ಮತ್ತು ವೈಯಕ್ತಿಕ ವಸ್ತುಗಳನ್ನು (ವ್ಯಾಲೆಟ್, ಅಲಂಕಾರಿಕ ಕನ್ನಡಕ, ಬೆಲ್ಟ್, ಟೋಪಿ, ಕ್ಯಾಮರಾ, ಆಭರಣಗಳು) ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.