ಕರ್ನಾಟಕ

karnataka

By

Published : Oct 7, 2019, 5:19 PM IST

ETV Bharat / city

ಮೇಯರ್​​ ಚುನಾವಣೆ ಬೆನ್ನಲ್ಲೇ ಪಕ್ಷದ ನಾಯಕ ಸ್ಥಾನಕ್ಕೆ ಪೈಪೋಟಿ: ಅ. 28ರಂದು ಘೋಷಣೆ

ಬಿಬಿಎಂಪಿಯಲ್ಲಿ ಬಿಜೆಪಿಯ ಆಡಳಿತ ಆರಂಭವಾಗಿದೆ. ಸದ್ಯ ಪಕ್ಷದ ನಾಯಕನ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದೆ. ಈ ಸ್ಥಾನಕ್ಕೆ ಆರು ಜನ ಬೇಡಿಕೆ ಇಟ್ಟಿದ್ದು, ಈ ತಿಂಗಳ 28ರಂದು ನಡೆಯುವ ಬಿಜೆಪಿಯ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿ ಘೋಷಣೆ ಮಾಡಲಾಗುವುದು ಎಂದು ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ತಿಳಿಸಿದ್ದಾರೆ.

ಬಿಜೆಪಿ ವಕ್ತಾರ ಎನ್ ಆರ್ ರಮೇಶ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತದ ಪರ್ವ ಆರಂಭವಾಗಿದೆ. ಇದೀಗ ಆಡಳಿತ ಪಕ್ಷದ ನಾಯಕನ ಆಯ್ಕೆ ಬಾಕಿ ಉಳಿದಿದ್ದು, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.

ಕಳೆದ ನಾಲ್ಕು ವರ್ಷದಿಂದ ಪ್ರತಿಪಕ್ಷದ ನಾಯಕನಾಗಿದ್ದ ಪದ್ಮನಾಭ ರೆಡ್ಡಿಯವರೇ ಆಡಳಿತ ಪಕ್ಷದ ನಾಯಕನ ಸ್ಥಾನದ ರೇಸ್​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಪ್ರಮುಖವಾಗಿ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿದ್ದ ಮಂಜುನಾಥ್ ರಾಜು, ಎಲ್.ಶ್ರೀನಿವಾಸ್, ಉಮೇಶ್ ಶೆಟ್ಟಿ, ಮುನೀಂದ್ರ ಕುಮಾರ್, ಮೋಹನ್ ಕುಮಾರ್, ಸಂಗಾತಿ ವೆಂಕಟೇಶ್ ಕೂಡಾ ರೇಸ್​​​ನಲ್ಲಿದ್ದಾರೆ ಎನ್ನಲಾಗುತ್ತಿದೆ. ಮೇಯರ್ ಸ್ಥಾನ ಸಿಗದೆ ಬೇಸರದಲ್ಲಿರುವ ಆಕಾಂಕ್ಷಿಗಳಲ್ಲಿ ಒಬ್ಬರಿಗೆ ನಾಯಕನ ಸ್ಥಾನ ಕೊಡುವ ಸಾಧ್ಯತೆ ಇದೆ.

ಬಿಜೆಪಿ ವಕ್ತಾರ ಎನ್.ಆರ್.ರಮೇಶ್

ಈ ಬಗ್ಗೆ ಮಾತನಾಡಿರುವ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಪ್ರತಿಕ್ರಿಯಿಸಿ, ಏಳು ಮಂದಿ ಮೇಯರ್ ಆಕಾಂಕ್ಷಿಗಳಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ಸಿಕ್ಕಿದೆ. ಉಳಿದ ಆರು ಮಂದಿ ಆಕಾಂಕ್ಷಿಗಳು ಆಡಳಿತ ಪಕ್ಷದ ನಾಯಕನ ಸ್ಥಾನದ ಆಕಾಂಕ್ಷೆಯಲ್ಲಿದ್ದಾರೆ. ವ್ಯವಸ್ಥೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಆಡಳಿತ ಪಕ್ಷದ ನಾಯಕನ ಸ್ಥಾನಕ್ಕೆ ಸಮರ್ಥರನ್ನು ಆಯ್ಕೆ ಮಾಡಲಾಗುವುದು. ಅಭ್ಯರ್ಥಿಯ ತಿಳುವಳಿಕೆ, ಹೋರಾಟ ನೋಡಿ ಪಕ್ಷ ತೀರ್ಮಾನ ಮಾಡಲಿದೆ ಎಂದರು.

ಪದ್ಮನಾಭ ರೆಡ್ಡಿಯವರು ಈವರೆಗೆ ಸ್ಥಾನ ಬೇಕು ಎಂದಿಲ್ಲ. ಆದರೆ ಉಳಿದ ಆರು ಜನ ಬೇಡಿಕೆ ಇಟ್ಟಿದ್ದಾರೆ. ಈ ತಿಂಗಳ 28ರಂದು ನಡೆಯುವ ಬಿಜೆಪಿ ನಗರ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಿ ಘೋಷಣೆ ಮಾಡಲಾಗುವುದು ಎಂದರು.

ABOUT THE AUTHOR

...view details