ಬೆಂಗಳೂರು: ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ ಅಸಮಾಧಾನಿತ ಶಾಸಕರ ಅಹವಾಲು ಆಲಿಸಿದ ಸಿಎಂ, ಪಕ್ಷ ಹಾಗು ಸರ್ಕಾರಕ್ಕೆ ಮುಜುಗರವಾಗುವಂತೆ ಹೇಳಿಕೆ ನೀಡಬೇಡಿ, ಏನೇ ಸಮಸ್ಯೆ ಇದ್ದರೂ ನೇರವಾಗಿ ಭೇಟಿ ಮಾಡಿ ಎಂದು ಸೂಚನೆ ನೀಡಿದರು.
ಅನುದಾನ ಬಿಡುಗಡೆ ಆಗುತ್ತಿಲ್ಲ, ಸಚಿವರು ನಮ್ಮ ಕೆಲಸ ಮಾಡಿಕೊಡುತ್ತಿಲ್ಲ, ಕ್ಷೇತ್ರದಲ್ಲಿ ಕೆಲಸ ಆಗುತ್ತಿಲ್ಲ ಎಂದು ಕೆಲ ಶಾಸಕರು ಬಹಿರಂಗವಾಗಿ ಆರೋಪ ಮಾಡಿದ್ದ ಹಿನ್ನೆಲೆ ಸಿಎಂ ಯಡಿಯೂರಪ್ಪ ಸಭೆ ನಡೆಸಿ ಶಾಸಕರ ಸಮಸ್ಯೆ ಆಲಿಸಿದರು. ಸಚಿವರು ನಮ್ಮ ಮನವಿಯನ್ನು ಕಡೆಗಣಿಸುತ್ತಿದ್ದಾರೆ ಎನ್ನುವುದು ಶಾಸಕರ ಪ್ರಮುಖ ಆರೋಪವಾಗಿತ್ತು.
ಕೊರೊನಾ ಕಾರಣಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದ್ದು, ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲು ಶುರುಮಾಡಿದ್ದರೂ ತಮ್ಮ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂದು ಸಭೆಯಲ್ಲಿ ಶಾಸಕರು ಬೇಸರ ವ್ಯಕ್ತಪಡಿಸಿದರು.
ಸಚಿವರಿಗೆ ಸಿಎಂ ಅನುದಾನದ ಭರವಸೆ
ಶಾಸಕರ ಅಹವಾಲು ಆಲಿಸಿದ ಸಿಎಂ, ಶಾಸಕರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯಲೇಬೇಕು ಎಂದು ಎಲ್ಲಾ ಸಚಿವರಿಗೂ ಕಟ್ಟುನಿಟ್ಟಾಗಿ ಸೂಚನೆ ನೀಡುವುದಾಗಿ ಮತ್ತು ಶಾಸಕರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಅನುದಾನದ ಬಾಕಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ಅರ್ಧಕ್ಕೆ ನಿಂತ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸಲಾಗುತ್ತದೆ, ಶಾಸಕರ ಕ್ಷೇತ್ರಗಳ ಉದ್ದೇಶಿತ ಕಾಮಗಾರಿಗಳಿಗೂ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಲಾಗುತ್ತದೆ ಎನ್ನುವ ಭರವಸೆ ನೀಡಿದರು.
ನಮ್ಮ ಮನೆಯ ಬಾಗಿಲು ನಿಮಗಾಗಿ ಸದಾ ತೆರೆದಿರುತ್ತದೆ
ಸಚಿವರು ನಿಮ್ಮ ಕೆಲಸ ಮಾಡಿಕೊಡದೇ ಇದ್ದಲ್ಲಿ ಅಥವಾ ನಿಮ್ಮನ್ನು ನಿರ್ಲಕ್ಷ್ಯ ಮಾಡಿದಲ್ಲಿ ಬಹಿರಂಗ ಹೇಳಿಕೆ ನೀಡಬಾರದು, ಏನೇ ಇದ್ದರೂ ನನ್ನ ಗಮನಕ್ಕೆ ತನ್ನಿ. ನಮ್ಮ ನಿವಾಸದ ಬಾಗಿಲು ಸದಾ ನಿಮಗೆಲ್ಲಾ ತೆರೆದಿರಲಿದೆ, ಯಾವಾಗ ಬೇಕಾದರೂ ಬಂದು ಭೇಟಿಯಾಗಿ ಮಾತನಾಡಿ ಅದನ್ನು ಬಿಟ್ಟು ಯಾವ ಕಾರಣಕ್ಕೂ ಅಸಮಾಧಾನದ ಬಗ್ಗೆ ಬಹಿರಂಗ ಹೇಳಿಕೆ ನೀಡಬೇಡಿ, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರವನ್ನುಂಟು ಮಾಡಬೇಡಿ ಎಂದು ಸೂಚನೆ ನೀಡಿದ್ದಾರೆ.