ಬೆಂಗಳೂರು: ಕಾಲೇಜುಗಳಲ್ಲೇ ವ್ಯಾಕ್ಸಿನ್ ಡ್ರೈವ್ ಮಾಡಿ ತರಗತಿಗಳನ್ನ ಆರಂಭಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮೂರನೇ ಅಲೆಯ ಮುನ್ನೆಚ್ಚರಿಕಾ ಕ್ರಮದ ಆಧಾರದ ಮೇಲೆ ಭೌತಿಕ ಹಾಗೂ ಶೈಕ್ಷಣಿಕ ವ್ಯವಸ್ಥೆಗೆ ಮರು ಚಾಲನೆ ನೀಡಲು ಮುಂದಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ.
3ನೇ ಅಲೆಗೆ ಕೈಗೊಳ್ಳಬೇಕಿರುವ ಸಿದ್ಧತೆ ಬಗ್ಗೆ ತಜ್ಞರ ಸಮಿತಿ ಮಧ್ಯಂತರ ವರದಿ ನೀಡುತ್ತಿದ್ದಂತೆ ಕೆಲವೊಂದು ಮಹತ್ವದ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಉನ್ನತ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎರಡೂ ಇಲಾಖೆಯಲ್ಲಿ ಭೌತಿಕ ಶೈಕ್ಷಣಿಕ ವ್ಯವಸ್ಥೆ ಜಾರಿಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ. ಆರಂಭದಲ್ಲಿ ವೈದ್ಯ, ದಂತ ವೈದ್ಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಬೇಕು, ಅದರ ಜೊತೆಯಲ್ಲೇ ಇತರ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಬೇಕು. ನಂತರ ಎಲ್ಲಾ ಪದವಿ ಕಾಲೇಜುಗಳನ್ನು ಆರಂಭಿಸಬೇಕು ಎನ್ನುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕಾಲೇಜುಗಳಲ್ಲಿ ವ್ಯಾಕ್ಸಿನ್ ಡ್ರೈವ್:ಜುಲೈ ತಿಂಗಳಿನಲ್ಲಿ ರಾಜ್ಯಕ್ಕೆ 60 ಲಕ್ಷ ಡೋಸೇಜ್ ವ್ಯಾಕ್ಸಿನ್ ಲಭ್ಯವಾಗಲಿದೆ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಮಾದರಿಯ ಲಸಿಕೆ ದೊಡ್ಡ ಪ್ರಮಾಣದಲ್ಲಿ ರಾಜ್ಯಕ್ಕೆ ಕೇಂದ್ರದಿಂದ ಸರಬರಾಜಾಗಲಿದೆ. ಭೌತಿಕ ಶೈಕ್ಷಣಿಕ ವ್ಯವಸ್ಥೆ ಆರಂಭಕ್ಕೆ ಈ ಲಸಿಕೆಯಲ್ಲಿ ಆದ್ಯತೆ ನೀಡಬೇಕು ಎನ್ನುವ ತೀರ್ಮಾನ ಕೈಗೊಳ್ಳಲಾಗಿದೆ. ವ್ಯಾಕ್ಸಿನ್ ಡ್ರೈವ್ ಮಾಡಿ ಕಾಲೇಜುಗಳನ್ನು ಆರಂಭಿಸಬೇಕು. ಲಸಿಕೆ ಪಡೆಯದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲೇ ಲಸಿಕೆ ನೀಡಿ ತರಗತಿ ಪ್ರವೇಶಕ್ಕೆ ಅವಕಾಶ ನೀಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ.