ಕರ್ನಾಟಕ

karnataka

ETV Bharat / city

ರಾಜ್ಯದಲ್ಲೂ ಕಲ್ಲಿದ್ದಲು ಕೊರತೆಯ ತೂಗುಗತ್ತಿ: ಯರಮರಸ್ ಉಷ್ಣ ಸ್ಥಾವರ ಕಾರ್ಯಸ್ಥಗಿತ; ಸದ್ಯ ಹೀಗಿದೆ ಸ್ಥಿತಿಗತಿ - Yermarus Thermal Power Station

ಇಂಧನ ಸಚಿವ ಸುನಿಲ್ ಕುಮಾರ್ ಕಲ್ಲಿದ್ದಲು ಕೊರತೆ ಇಲ್ಲ ಅಂದಿದ್ದರೂ ವಾಸ್ತವದಲ್ಲಿ ಕಲ್ಲಿದ್ದಲು ಪೂರೈಕೆ ವ್ಯತ್ಯಯ ಆಗಿದ್ದು, ರಾಜ್ಯದ ಪ್ರಮುಖ ಮೂರು ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗುತ್ತಿದೆ.

Yermarus Thermal Power Station
ಯರಮರಸ್ ಉಷ್ಣ ಸ್ಥಾವರ ಕಾರ್ಯಸ್ಥಗಿತ

By

Published : May 1, 2022, 8:59 PM IST

ಬೆಂಗಳೂರು: ಸದ್ಯ ದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಕೊರತೆ ಎದುರಾಗಿದೆ. ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳೂ ಕಲ್ಲಿದ್ದಲ ಕೊರತೆ ಎದುರಿಸುತ್ತಿದೆ. ಯರಮರಸ್ ಉಷ್ಣ ವಿದ್ಯತ್ ಸ್ಥಾವರ ಸಂಪೂರ್ಣ ಕಾರ್ಯಸ್ಥಗಿತಗೊಳಿಸಿದೆ. ಅಷ್ಟಕ್ಕೂ ರಾಜ್ಯದ ಕಲ್ಲಿದ್ದಲು ಸ್ಥಿತಿಗತಿ ಏನಿದೆ ಎಂಬ ವರದಿ ಇಲ್ಲಿದೆ.

ದೇಶ ತೀವ್ರ ಕಲ್ಲಿದ್ದಲ ಕೊರತೆ ಎದುರಿಸುತ್ತಿದೆ. ಉಷ್ಣ ವಿದ್ಯುತ್ ಸ್ಥಾವರಗಳು ತೀವ್ರ ಕಲ್ಲಿದ್ದಲ ವಿದ್ಯುತ್ ಕೊರತೆ ಎದುರಿಸುತ್ತಿವೆ. ಅದಕ್ಕಾಗಿ ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ಉಷ್ಣ ವಿದ್ಯುತ್ ಉತ್ಪಾದನಾ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆಗಾಗಿ ಅನೇಕ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಿದೆ. ಇತ್ತ ಕರ್ನಾಟಕ ರಾಜ್ಯವೂ ಕಲ್ಲಿದ್ದಲು ಕೊರತೆ ಎದುರಿಸುತ್ತಿದೆ. ಇಂಧನ ಸಚಿವ ಸುನಿಲ್ ಕುಮಾರ್ ಕಲ್ಲಿದ್ದಲು ಕೊರತೆ ಇಲ್ಲ ಅಂದಿದ್ದರೂ ವಾಸ್ತವದಲ್ಲಿ ಕಲ್ಲಿದ್ದಲು ಪೂರೈಕೆ ವ್ಯತ್ಯಯ ಆಗಿದ್ದು, ರಾಜ್ಯದ ಪ್ರಮುಖ ಮೂರು ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆ ಎದುರಾಗುತ್ತಿದೆ.

ಯರಮರಸ್ ಉಷ್ಣ ವಿದ್ಯತ್ ಸ್ಥಾವರ ಸ್ಥಗಿತ:ಕಲ್ಲಿದ್ದಲ ಕೊರತೆ ಹಿನ್ನೆಲೆ ಕಳೆದ ಮೂರು ನಾಲ್ಕು ದಿನಗಳಿಂದ ಯರಮರಸ್ ಉಷ್ಣ ವಿದ್ಯತ್ ಸ್ಥಾವರದ ಎರಡೂ ಘಟಕಗಳ ಕಾರ್ಯಸ್ಥಗಿತವಾಗಿದೆ. ತಾಂತ್ರಿಕ ಕಾರಣದಿಂದ ಕಾರ್ಯಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ವಾಸ್ತವದಲ್ಲಿ ಕಲ್ಲಿದ್ದಲ ಕೊರತೆ ಎದ್ದು ಕಾಣುತ್ತಿದೆ.

ಯರಮರಸ್ ವಿದ್ಯತ್ ಸ್ಥಾವರ 1,600 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಯರಮರಸ್ ಉಷ್ಣ ವಿದ್ಯತ್ ಸ್ಥಾವರಕ್ಕೆ ನಿತ್ಯ 28,000 ಮೆಟ್ರಿಕ್ ಟನ್ ಕಲ್ಲಿದ್ದಲು ಬೇಕು. ಶನಿವಾರದವರೆಗೆ ಅಲ್ಲಿದ್ದ ಕಲ್ಲಿದ್ದಲು ಸಂಗ್ರಹ 34,000 ಮೆಟ್ರಿಕ್ ಟನ್. ಏ.27ಕ್ಕೆ ಸ್ಥಾವರಕ್ಕೆ 3,973 ಮೆ.ಟನ್ ಕಲ್ಲಿದ್ದಲು ಪೂರೈಕೆಯಾಗಿತ್ತು. ಅದೇ ಏ.28ರಂದು 14,856 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ. ಶನಿವಾರಕ್ಕೆ 7,470 ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೀಮಿತ ಕಲ್ಲಿದ್ದಲು ಪೂರೈಕೆ ಹಿನ್ನೆಲೆ ಸಂಗ್ರಹ ಕೇವಲ 34,000 ಮೆಟ್ರಿಕ್ ಟನ್ ಇದೆ. ಇದೇ ಹಿನ್ನೆಲೆ ಸ್ಥಾವರದಲ್ಲಿ ವಿದ್ಯತ್ ಉತ್ಪಾದನೆ ಸ್ಥಗಿತವಾಗಿದೆ ಎನ್ನಲಾಗುತ್ತಿದೆ.

ಆರ್ ಟಿಪಿಎಸ್ ನಲ್ಲಿ 64,820 ಮೆ.ಟನ್ ಕಲ್ಲಿದ್ದಲು:ರಾಯಚೂರು ಉಷ್ಣ ವಿದ್ಯುತ್ ಸ್ಥಾವರದಲ್ಲಿ ಸದ್ಯಕ್ಕೆ ಸೀಮಿತ ಕಲ್ಲಿದ್ದಲು ಸಂಗ್ರಹ ಇದೆ. ಸದ್ಯ ಆರ್​ಟಿಪಿಸಿಆರ್​ನಲ್ಲಿ 64,820 ಮೆಟ್ರಿಕ್​ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಆರ್​ಟಿಪಿಸಿಆರ್​ಗೆ ನಿತ್ಯ 25,000 ಮೆಟ್ರಿಕ್​ ಟನ್ ಕಲ್ಲಿದ್ದಲು ಅಗತ್ಯ ಇದೆ.

ಏ.27ರಂದು 19,788 ಮೆಟ್ರಿಕ್ ಟನ್​ ಕಲ್ಲಿದ್ದಲು ಪೂರೈಕೆಯಾಗಿದ್ದು, 19,631 ಮೆ.ಟನ್ ಬಳಕೆಯಾಗಿದೆ. ಅದೇ ಏ.28ರಂದು 15,912 ಮೆ.ಟನ್ ಕಲ್ಲಿದ್ದಲು ಪೂರೈಕೆಯಾಗಿದ್ದು, 18,825 ಮೆ.ಟನ್ ಬಳಕೆ ಮಾಡಲಾಗಿದೆ. ಇನ್ನು ಶನಿವಾರ 11,968 ಮೆ.ಟನ್ ಕಲ್ಲಿದ್ದಲು ಪೂರೈಕೆಯಾಗಿದ್ದು, 17,952 ಮೆ.ಟನ್ ಬಳಕೆಯಾಗಿದೆ ಎಂದು ಅಧಿಕಾರಿಗಳು ಅಂಕಿಅಂಶ ನೀಡಿದ್ದಾರೆ. ಆರ್ ಟಿಪಿಸಿಆರ್ ನ 8 ಘಟಕಗಳ ಪೈಕಿ ಎರಡು ಘಟಕಗಳು ಕಾರ್ಯಸ್ಥಗಿತಗೊಳಿಸಲಾಗಿದ್ದು, 6 ಘಟಕಗಳು ಕಾರ್ಯನಿರ್ವಹಿಸುತ್ತಿವೆ. 1,720 ಮೆ.ವಾ. ಸಾಮರ್ಥ್ಯದ ಆರ್ ಟಿಪಿಸಿಆರ್ ನಲ್ಲಿ ಶನಿವಾರ ಗರಿಷ್ಠ 951 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ.

ಬಳ್ಳಾರಿ ಉಷ್ಟ ವಿದ್ಯುತ್ ಸ್ಥಾವರದಲ್ಲೂ ಸೀಮಿತ ಕಲ್ಲಿದ್ದಲು:ಬಳ್ಳಾರಿ ಥರ್ಮಲ್ ಸ್ಥಾವರದಲ್ಲೂ ಸೀಮಿತ ಕಲ್ಲಿದ್ದಲು ಪೂರೈಕೆಯಾಗುತ್ತಿದೆ. ಸದ್ಯಕ್ಕೆ 55,673 ಮೆ.ಟನ್ ಕಲ್ಲಿದ್ದಲು ಸಂಗ್ರಹವಿದೆ. ಶನಿವಾರ 16,048 ಮೆ.ಟ. ಕಲ್ಲಿದ್ದಲು ಪೂರೈಕೆ ಮಾಡಲಾಗಿದ್ದು, 21,117 ಮೆ.ಟನ್ ಬಳಕೆಯಾಗಿದೆ.

ಬಳ್ಳಾರಿ ಉಷ್ಟ ವಿದ್ಯತ್ ಸ್ಥಾವರಕ್ಕೆ ನಿತ್ಯ ಸುಮಾರು 25,000 ಮೆ.ಟನ್ ಕಲ್ಲಿದ್ದಲು ಬೇಕು. ಸದ್ಯ ಮೂರೂ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಗರಿಷ್ಠ 1,261 ಮೆ.‌ವ್ಯಾಟ್ ವಿದ್ಯತ್ ಉತ್ಪಾದನೆ ಮಾಡಿದೆ. ಸದ್ಯ ಅತಿ ಹೆಚ್ಚು ಪ್ರಮಾಣದಲ್ಲಿ ವಿದ್ಯತ್ ಉತ್ಪಾದನೆ ಮಾಡಲಾಗುತ್ತಿದೆ. ಕಲ್ಲಿದ್ದಲು ಪೂರೈಕೆ ಇನ್ನೂ ಹೆಚ್ಚಿಗೆಯಾಗಬೇಕಿದ್ದು, ಇಲ್ಲವಾದರೆ ಕೆಲ ಘಟಕ ಸ್ಥಗಿತ ಅನಿವಾರ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ರಾಜ್ಯದ ವಿದ್ಯುತ್ ಬೇಡಿಕೆ, ಪೂರೈಕೆ ಹೇಗಿದೆ?:ರಾಜ್ಯದಲ್ಲಿ ತಾಮಮಾನ ಗರಿಷ್ಠ ಮಟ್ಟಕ್ಕೆ ಹೋಗುತ್ತಿದ್ದು, ವಿದ್ಯುತ್ ಬೇಡಿಕೆಯೂ ಗಗನಕ್ಕೆ ಏರಿದೆ. ಶನಿವಾರ ರಾಜ್ಯದಲ್ಲಿ 12,879 ಮೆ.ವ್ಯಾಟ್ ವಿದ್ಯುತ್ ಬೇಡಿಕೆ ಇತ್ತು. ಒಟ್ಟು 279.34 ಮಿ.ಯುನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ.

ಈ ಪೈಕಿ ಎರಡು ಉಷ್ಣ ವಿದ್ಯುತ್ ಸ್ಥಾವರ, ಜಲ ವಿದ್ಯತ್ ಸ್ಥಾವರಗಳಿಂದ ಶನಿವಾರ ಒಟ್ಟು 94.54 ಮಿಲಿಯನ್ ಯುನಿಟ್ ವಿದ್ಯತ್ ಪೂರೈಕೆ ಮಾಡಲಾಗಿದೆ. ಕೇಂದ್ರ ಗ್ರಿಡ್​ನಿಂದ ಸುಮಾರು 77.8 ಮಿ.ಯುನಿಟ್ ವಿದ್ಯುತ್ ಪೂರೈಕೆಯಾಗಿದ್ದರೆ, ವಿಂಡ್, ಸೋಲಾರ್ ಸೇರಿ ನವೀಕರಿಸಬಹುದಾದ ವಿದ್ಯುತ್ ಮೂಲದಿಂದ ಸುಮಾರು 76 ಮಿ.ಯುನಿಟ್ ಪೂರೈಕೆಯಾಗಿದೆ.

ಇದನ್ನೂ ಓದಿ:ಕರ್ನಾಟಕದ ಮರಾಠಿ ಭಾಷಿಕ ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟಕ್ಕೆ ಬೆಂಬಲ: ಅಜಿತ್ ಪವಾರ್

ABOUT THE AUTHOR

...view details