ಬೆಂಗಳೂರು: ಏಪ್ರಿಲ್ನಲ್ಲಿ ಕಲ್ಲಿದಲು ಕೊರತೆನೂ ಇಲ್ಲ, ವಿದ್ಯುತ್ ಕೊರತೆನೂ ಇಲ್ಲ ಎಂದಿದ್ದ ಸರ್ಕಾರ ಅದೇ ತಿಂಗಳು ಕಲ್ಲಿದ್ದಲು ಕೊರತೆಯ ಕಾರಣಕ್ಕೆ ವಿದ್ಯುತ್ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಕಳೆದ ತಿಂಗಳು ದೇಶಾದ್ಯಂತ ಕಲ್ಲಿದ್ದಲು ಅಭಾವ ಎದುರಾಗಿತ್ತು. ಇದರಿಂದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಕುಂಠಿತವಾಗಿ ವಿದ್ಯುತ್ ಉತ್ಪಾದನೆ ಮೇಲೆ ಪರಿಣಾಮ ಉಂಟಾಗಿದೆ. ರಾಜ್ಯವೂ ಕಲ್ಲಿದ್ದಲ ಕೊರತೆಯ ಆತಂಕಕ್ಕೆ ಒಳಗಾಗಿತ್ತು. ಆದರೆ ಇಂಧನ ಸಚಿವ ಸುನೀಲ್ ಕುಮಾರ್ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ವಿದ್ಯುತ್ ಕೊರತೆಯೂ ಇಲ್ಲ ಎಂದು ಹೇಳಿಕೆ ನೀಡಿದ್ದರು.
ಏಪ್ರಿಲ್ ತಿಂಗಳಲ್ಲಿ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಬಳ್ಳಾರಿ ಮತ್ತು ರಾಯಚೂರು ಘಟಕಗಳನ್ನು ಬೇಡಿಕೆ ಇಲ್ಲ ಎಂದು ಬಂದ್ ಮಾಡಿದ್ದೇವೆ. ಕಲ್ಲಿದ್ದಲು ಕೊರತೆಯಿಂದ ಅಲ್ಲ. ನಾವು 6 ತಿಂಗಳ ಮುಂಚೆಯೇ ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಅದೇ ತಿಂಗಳಲ್ಲಿ ಇಂಧನ ಇಲಾಖೆ ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ.
ಏಪ್ರಿಲ್ನಲ್ಲಿ 119.60 ಮಿ.ಯೂ. ವಿದ್ಯುತ್ ಖರೀದಿ:ಏಪ್ರಿಲ್ ತಿಂಗಳಲ್ಲಿ ಬೇಸಿಗೆಯಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಕೇಂದ್ರದಿಂದ ಕಲ್ಲಿದ್ದಲು ಪೂರೈಕೆ ಕೊರತೆಯಾಗಿದ್ದರಿಂದ 119.60 ಮಿ.ಯೂ. ನಷ್ಟು ವಿದ್ಯುತ್ ಖರೀದಿಸಲಾಗಿದೆ ಎಂದು ಇಂಧನ ಇಲಾಖೆ ಒಪ್ಪಿಕೊಂಡಿದೆ. ಇಲಾಖೆ ಸರಾಸರಿ ಪ್ರತಿ ಯೂನಿಟ್ಗೆ 10.18 ರೂನಂತೆ ಒಟ್ಟು 121.78 ರೂ. ಕೋಟಿ ಮೊತ್ತದಷ್ಟು ವಿದ್ಯುತ್ ವಿನಿಮಯ ಕೇಂದ್ರದ ಮೂಲಕ ವಿದ್ಯುತ್ ಖರೀದಿ ಮಾಡಿರುವುದಾಗಿ ತಿಳಿಸಿದೆ. ಏಪ್ರಿಲ್ನಲ್ಲಿ ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್ ಘಟಕಗಳು ಕಲ್ಲಿದ್ದಲು ಕೊರತೆಯಿಂದಲೇ ಕಾರ್ಯ ಸ್ಥಗಿತಗೊಳಿಸಿರುವುದು ಇದರಿಂದ ಸ್ಪಷ್ಟ. ಈ ಕೊರತೆ ನೀಗಿಸಲು ವಿದ್ಯುತ್ ಖರೀದಿಸಿರುವುದು ಬಹಿರಂಗವಾಗಿದೆ. ಆದರೆ, ಅಂದು ಸಚಿವ ಸುನೀಲ್ ಕುಮಾರ್ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ ಎಂದಿದ್ದರು. ರಾಯಚೂರು ಮತ್ತು ಬಳ್ಳಾರಿ ಉಷ್ಣ ವಿದ್ಯುತ್ ಘಟಕಗಳನ್ನು ಕಲ್ಲಿದ್ದಲು ಕೊರತೆಯಿಂದ ಅಲ್ಲ, ಬೇಡಿಕೆ ಇಲ್ಲದ ಕಾಣರ ನಿಲ್ಲಿಸಿದ್ದೇವೆ ಎಂದು ಸಮಜಾಯಿಷಿ ನೀಡಿದ್ದರು.
ಇದೀಗ ಇಂಧನ ಇಲಾಖೆಯೇ ನೀಡಿದ ಅಧಿಕೃತ ಮಾಹಿತಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಕಲ್ಲಿದ್ದಲು ಕೊರತೆ ಹಿನ್ನೆಲೆಯಲ್ಲಿ 119.60 ಮಿ.ಯೂ. ನಷ್ಟು ವಿದ್ಯುತ್ ಖರೀದಿಸಿರುವುದಾಗಿ ಒಪ್ಪಿಕೊಂಡಿದೆ. ವಿದ್ಯುತ್ ಬೇಡಿಕೆ ಈಡೇರಿಸಲು ಪ್ರತಿ ಯೂನಿಟ್ಗೆ 10.18 ರೂ. ಪಾವತಿಸಿ ಒಟ್ಟು 121.78 ರೂ. ಕೋಟಿ ಮೊತ್ತದಷ್ಟು ವಿದ್ಯುತ್ ವಿನಿಮಯ ಕೇಂದ್ರದ ಮೂಲಕ ವಿದ್ಯುತ್ ಖರೀದಿ ಮಾಡಿದೆ. ಆ ಮೂಲಕ ಏಪ್ರಿಲ್ನಲ್ಲಿ ಕಲ್ಲಿದ್ದಲು ಕೊರತೆ ಎದುರಾಗಿದ್ದೂ ಹೌದು, ವಿದ್ಯುತ್ ಕೊರತೆ ಎದುರಾಗಿದ್ದೂ ಹೌದು. ವಾಸ್ತವತೆ ಹೀಗಿದ್ದರೂ, ಸಚಿವ ಸುನಿಲ್ ಕುಮಾರ್ ಮಾತ್ರ ಯಾವುದೇ ಕೊರತೆ ಇಲ್ಲ ಎಂದು ಹೇಳಿಕೆ ನೀಡಿದ್ದು ಏಕೆ ಎಂಬ ಅನುಮಾನ ಮೂಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿ ಇಲ್ಲ, ಕಲ್ಲಿದ್ದಲು ಕೊರತೆಯೂ ಇಲ್ಲ: ಸಚಿವ ಸುನೀಲ್ ಕುಮಾರ್