ಕರ್ನಾಟಕ

karnataka

ETV Bharat / city

ಮಧ್ಯಂತರ ಬಜೆಟ್ ಮಂಡಿಸಲು ಸಿಎಂ ಯಡಿಯೂರಪ್ಪ ತಯಾರಿ - ಸಿಎಂ ಯಡಿಯೂರಪ್ಪ

ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮೂರು ತಿಂಗಳ ಲೇಖಾನುದಾನಕ್ಕೆ ಅನುಮೋದನೆ ಪಡೆದಿದ್ದರು. ಲೇಖಾನುದಾನ ಅ. 31ಕ್ಕೆ ಅಂತ್ಯವಾಗಲಿದ್ದು, ಅಷ್ಟರೊಳಗೆ ಮಧ್ಯಂತರ ಬಜೆಟ್ ಮಂಡಿಸಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ.

ಮಧ್ಯಂತರ ಬಜೆಟ್ ಮಂಡನೆ ಚಿಂತನೆಯಲ್ಲಿ ಸಿಎಂ ಯಡಿಯೂರಪ್ಪ

By

Published : Aug 22, 2019, 5:19 PM IST

ಬೆಂಗಳೂರು: ಮೈತ್ರಿ ಸರ್ಕಾರ ಹೋಗಿ ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ರಚನೆಯಾಗಿದೆ. ಸಿಎಂ ಯಡಿಯೂರಪ್ಪ ಅವರು ಇದೀಗ ತಮ್ಮದೇ ಯೋಜನೆಗಳನ್ನು ಒಳಗೊಂಡ ಪೂರಕ‌ ಬಜೆಟ್ ಮಂಡಿಸಲು ತಯಾರಿ ನಡೆಸುತ್ತಿದ್ದಾರೆ.

ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಆಗುತ್ತಿದ್ದು, ಸಚಿವ ಸಂಪುಟ ರಚನೆ ಮಾಡಿದ್ದಾರೆ. ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಅವರು ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್‌ ವರೆಗೆ ಮೂರು ತಿಂಗಳಿಗೆ 62,751 ಕೋಟಿ ರೂ. ಮೊತ್ತಕ್ಕೆ ಲೇಖಾನುದಾನಕ್ಕೆ ಅನುಮೋದನೆ ಪಡೆದಿದ್ದರು. ಆರ್ಥಿಕ ವರ್ಷ ಅಂತ್ಯದವರೆಗೆ ಅಂದರೆ ಎಂಟು ತಿಂಗಳಿಗೆ ಧನವಿನಿಯೋಗ ಮಸೂದೆ ಮಂಡಿಸಲು ಪ್ರತಿಪಕ್ಷಗಳು ಆಗ್ರಹಿಸಿದರೂ, ಬಿಎಸ್​​ವೈ ಕೇವಲ ಮೂರು ತಿಂಗಳಿಗೆ ಅಂದ್ರೆ ಅಕ್ಟೋಬರ್ ಅಂತ್ಯದವರೆಗೆ ಮಾತ್ರ ಲೇಖಾನುದಾನಕ್ಕೆ ಅನುಮೋದನೆ ಪಡೆದಿದ್ದರು. ಇನ್ನು ಬರ ನಿರ್ವಹಣೆಗಾಗಿ ಸುಮಾರು 3,320 ಕೋಟಿ ರೂ. ಪೂರಕ ಅಂದಾಜಿಗೂ ಸದನದಲ್ಲಿ ಅನುಮೋದನೆ ಪಡೆದರು. ಇದೀಗ ನವಂಬರ್​ನಿಂದ 2020 ಮಾರ್ಚ್ ವರೆಗಿನ ಐದು ತಿಂಗಳ ಅವಧಿಗೆ ಮಧ್ಯಂತರ ಬಜೆಟ್ ಮಂಡನೆಗೆ ಸಿಎಂ ಯಡಿಯೂರಪ್ಪ ಪ್ರಾಥಮಿಕ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಮಧ್ಯಂತರ ಬಜೆಟ್ ಮಂಡನೆ ಚಿಂತನೆಯಲ್ಲಿ ಸಿಎಂ ಯಡಿಯೂರಪ್ಪ

ಅಕ್ಟೋಬರ್ ಅಂತ್ಯಕ್ಕೆ ಮಧ್ಯಂತರ ಬಜೆಟ್?

ಸದ್ಯ ಸುಮಾರು 23,000 ಕೋಟಿ ವಿತ್ತೀಯ ಕೊರತೆ ಇದ್ದು, ಈಗಾಗಲೇ ಸಿಎಂ, ಮಧ್ಯಂತರ ಬಜೆಟ್ ತಯಾರಿಸುವ ನಿಟ್ಟಿನಲ್ಲಿ ಆರ್ಥಿಕ ಸ್ಥಿತಿಗತಿ, ಸಾಲ, ವಿತ್ತೀಯ ಕೊರತೆ ಎಲ್ಲದರ ಬಗ್ಗೆ ಮಾಹಿತಿ ನೀಡಲು ಆರ್ಥಿಕ ಇಲಾಖೆಗೆ ಸೂಚಿಸಿದ್ದಾರೆ. ಲೇಖಾನುದಾನ ಅ. 31ಕ್ಕೆ ಅಂತ್ಯವಾಗಲಿದ್ದು, ಅಷ್ಟರೊಳಗೆ ಮಧ್ಯಂತರ ಅಥವಾ ಪೂರಕ ಬಜೆಟ್ ಮಂಡಿಸಲು ಸಿಎಂ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ಈ ಮೂಲಕ ತಮ್ಮ ಸರ್ಕಾರದ ಹೊಸ ಯೋಜನೆಗಳನ್ನು ಜಾರಿಗೆ ತರಲು ತಯಾರಿ ನಡೆಸುತ್ತಿದ್ದಾರೆ ಎಂದು ಅರ್ಥಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳು ಪೂರಕ ಬಜೆಟ್ ರೂಪುರೇಷೆ ಸಂಬಂಧ ಪ್ರಾಥಮಿಕ ಹಂತದಲ್ಲಿ ಪೂರ್ವ ತಯಾರಿಗಳನ್ನು ನಡೆಸುತ್ತಿದ್ದಾರೆ. ಹಿಂದಿನ ಸರ್ಕಾರದ ಸಾಲ ಮನ್ನಾದದಿಂದ ಉಂಟಾಗಿರುವ ಆರ್ಥಿಕ ಹೊರೆಯ ಮಧ್ಯೆ ಹೊಸ ಮಧ್ಯಂತರ ಬಜೆಟ್ ಸಿದ್ಧತೆಯ ಲೆಕ್ಕಾಚಾರ, ಬಜೆಟ್ ಗಾತ್ರ, ಸಂಪನ್ಮೂಲ ಸಂಗ್ರಹ, ಖರ್ಚು ವೆಚ್ಚಗಳ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳು ಲೆಕ್ಕಾಚಾರ ನಡೆಸುತ್ತಿದ್ದಾರೆ.

ಹೊಸ ಯೋಜನೆ ಘೋಷಿಸಲು ಚಿಂತನೆ:

ತಮ್ಮ ಸರ್ಕಾರದ ಹೊಸ ಯೋಜನೆಗಳನ್ನು ಮಧ್ಯಂತರ ಬಜೆಟ್​​ನಲ್ಲಿ ಘೋಷಿಸಲು ಸಿಎಂ ಚಿಂತನೆ ನಡೆಸುತ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಹೆಚ್ಚುವರಿ 4,000 ರೂ. ನೀಡಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಅದಕ್ಕಾಗಿ ಬಜೆಟ್​​ನಲ್ಲೇ ಅನುದಾನ ಮೀಸಲಿಡಲಿದ್ದಾರೆ. ಅದರ ಜತೆಗೆ ತಮ್ಮ ಹಿಂದಿನ ಸರ್ಕಾರದ ಭಾಗ್ಯಲಕ್ಷ್ಮಿ, ಮಡಿಲು ಕಿಟ್ ಯೋಜನೆ, ಅಟಲ್ ಸಾರಿಗೆ ಯೋಜನೆಗೆ ಬಜೆಟ್​ನಲ್ಲಿ ಹೆಚ್ಚುವರಿ ಅನುದಾನ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅವುಗಳಿಗಾಗಿ ಸಂಪನ್ಮೂಲ ಕ್ರೋಢೀಕರಣದ ಲೆಕ್ಕಾಚಾರದಲ್ಲಿ ಸಿಎಂ ಇದ್ದಾರೆ. ಅಷ್ಟೇ ಅಲ್ಲದೇ ಹಿಂದಿನ ಮೈತ್ರಿ ಸರ್ಕಾರದ ಕೆಲ ಯೋಜನೆಗಳಿಗೆ ಅನುದಾನ ಕತ್ತರಿ ಹಾಕುವ ಸಾಧ್ಯತೆ ಇದೆ. ಪ್ರಮುಖವಾಗಿ ಸಾಲ‌ ಮನ್ನಾ ಯೋಜನೆ, ಅನ್ನಭಾಗ್ಯ ಯೋಜನೆಗಳ ಅನುದಾನ ಕಡಿತಗೊಳಿಸಿ ಅದನ್ನು ತಮ್ಮ ಸರ್ಕಾರದ ಹೊಸ ಯೋಜನೆಗಳಿಗೆ ಮೀಸಲಿಡಲು ಚಿಂತನೆ ನಡೆದಿದೆ. ಇದೀಗ ಸಂಪುಟ ರಚನೆಯಾಗಿದ್ದು, ಮಧ್ಯಂತರ ಬಜೆಟ್​​ಗಾಗಿ ಪೂರ್ವ ಸಿದ್ಧತೆ ಇನ್ನಷ್ಟು ಚುರುಕು ಪಡೆಯಲಿದೆ.

ABOUT THE AUTHOR

...view details