ಬೆಂಗಳೂರು: ರೈತರಿಂದಾಗಿಯೇ ನಾನು ಇಂದು ಮುಖ್ಯಮಂತ್ರಿ ಸ್ಥಾನದಲ್ಲಿ ಬಂದು ಕುಳಿತಿದ್ದೇನೆ. ನನ್ನಿಂದ ಯಾವ ಕಾರಣಕ್ಕೂ ಅನ್ನದಾತರಿಗೆ ಅನ್ಯಾಯವಾಗಲ್ಲ. ಖುದ್ದು ನಾನೇ ರಾಜ್ಯ ಪ್ರವಾಸ ಮಾಡಿ ಕಾಯ್ದೆಯಿಂದಾಗುವ ಅನುಕೂಲ ಹಾಗೂ ಕಾಂಗ್ರೆಸ್ ನಾಯಕರ ದ್ವಿಮುಖ ನೀತಿ ಬಗ್ಗೆ ರೈತರಿಗೆ ಮನವರಿಕೆ ಮಾಡಿ ಕೊಡುತ್ತೇನೆ ಎಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಎಪಿಎಂಸಿ, ಭೂ ಸುಧಾರಣಾ ಕಾಯ್ದೆಗಳ ತಿದ್ದುಪಡಿ ಬಗ್ಗೆ ರೈತ ಸಂಘಟನೆಗಳು, ಕಾಂಗ್ರೆಸ್ನ ಕೆಲವರು ಪಿತೂರಿ ನಡೆಸಿ ಧರಣಿ ಸತ್ಯಾಗ್ರಹ, ಬಂದ್ ಮಾಡುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಆರೋಪಿಸಿದರು.
ರೈತ ಮುಖಂಡರನ್ನು ವಿಧಾನಸೌಧಕ್ಕೆ ಕರೆಸಿ ಈ ಕಾಯ್ದೆಯಿಂದ ಹೇಗೆ ಅನುಕೂಲ ಆಗಲಿದೆ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ಆದರೆ, ಅವರು ಬಂದ್ ಮಾಡಲೇಬೇಕು ಎನ್ನುವ ನಿಶ್ಚಯ ಮಾಡಿಯೇ ಬಂದಿದ್ದರು. ಈಗ ಬರೀ ಕಾಫಿ,ಟೀ ಕೊಟ್ಟು ಕಳಿಸಿದರು. ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಬಂದವರಿಗೆ ಕಾಫಿ,ಟೀ ಕೊಡಬಾರದಾ? ಚರ್ಚೆಗೆ ಅವಕಾಶ ಕೊಟ್ಟಿದ್ದೆ. ಆದರೆ, ಅವರು ಏನೂ ಹೇಳಲಿಲ್ಲ,ಯಾವ ಸಲಹೆಯನ್ನೂ ಕೊಡಲಿಲ್ಲ. ಹಾಗಾಗಿ ಸಭೆ ವಿಫಲವಾಯಿತು ಎಂದರು.
ರಾಜ್ಯದ ಜನರ ಮುಂದೆ ಹೋಗಿ ಕಾಯ್ದೆ ಬಗ್ಗೆ ಅರಿವು ಮೂಡಿಸುವೆ- ಬಿ ಎಸ್ ಯಡಿಯೂರಪ್ಪ ನಾನು ರೈತನ ಮಗನಾಗಿ 4ನೇ ಬಾರಿ ಮುಖ್ಯಮಂತ್ರಿ ಆಗಿದ್ದೇನೆ. ನನ್ನಿಂದ ಅನ್ನ ಕೊಡುವ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಲು ಬಿಡಲ್ಲ. ಅಧಿಕಾರಕ್ಕೆ ಅಂಟಿಕೊಂಡು ಕೂರಲ್ಲ, ರೈತರ ಪರ ಇರುವವನು ನಾನು. ನಾಡಿನ ಅನ್ನದಾತನ ಭವಿಷ್ಯದ ದೃಷ್ಟಿಯಿಂದ, ವಿಧಾನಮಂಡಲದಲ್ಲಿ ಸಾಕಷ್ಟು ಚರ್ಷೆ ನಡೆಸಿ ತಿದ್ದುಪಡಿ ತರಲಾಗಿದೆ ಎಂದು ಕಾಯ್ದೆಯನ್ನು ಸಮರ್ಥಿಸಿದರು.
ನನ್ನ ಮೇಲೆ ಎಪಿಎಂಸಿ ಕೇಸ್ ಇವೆ :ನನ್ನ ಬೆಳೆ ನನ್ನ ಹಕ್ಕು ಎನ್ನುವ ಕಾಯ್ದೆ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಗಳನ್ನು ಎಲ್ಲಿ ಬೇಕಾದ್ರೂ ಮಾರಾಟ ಮಾಡಬಹುದು. ಎಪಿಎಂಸಿ ಅಥವಾ ನೇರವಾಗಿ ದೇಶದ ಯಾವುದೇ ಭಾಗಕ್ಕೆ ಹೋಗಿ ಮಾರಾಟ ಮಾಡಬಹುದು. ರೈತರಿಗೆ ಈ ಅವಕಾಶ ಸಿಗಬೇಕು ಎಂದು ಹೋರಾಟ ಮಾಡಿಕೊಂಡು ಬಂದವನು ನಾನು. ಒಂದು ಕಾಲದಲ್ಲಿ ಬೇರೆ ಜಿಲ್ಲೆಗೆ ಹೋಗಿ ಮಾರಾಟ ಮಾಡಿದ್ರೂ ಕೇಸ್ ಹಾಕುತ್ತಿದ್ದರು. ನನ್ನ ಮೇಲೂ ಕೇಸ್ ಹಾಕಿದ್ದರು. ಈಗಲೂ ಕೇಸ್ಗಳಿವೆ. ಆದರೆ, ಇನ್ಮುಂದೆ ಇಂತಹ ಕೇಸು ರೈತರ ಮೇಲೆ ಹಾಕಲು ಅವಕಾಶವಿಲ್ಲ ಎಂದರು.
ಎಪಿಎಂಸಿಗೆ ಆರ್ಥಿಕ ಸಮಸ್ಯೆಯಾದ್ರೆ ಭರಿಸಲು ಸರ್ಕಾರ ಸಿದ್ದ :ಎಲ್ಲಿ ಬೇಕೋ ಅಲ್ಲಿ ಖುಷಿ ಬಂದ ಕಡೆ ಮಾರಾಟ ಮಾಡುವ ಸ್ವಾತಂತ್ರ ರೈತರಿಗೆ ಕೊಡಲಾಗಿದೆ. ಇದು ಐತಿಹಾಸಿಕ ನಿರ್ಣಯ, ಇದರ ಬಗ್ಗೆ ತಪ್ಪು ಕಲ್ಪನೆ ಬೇಡ. ಈವರೆಗೂ ಎಪಿಎಂಸಿಗಳಲ್ಲಿ ದಲ್ಲಾಳಿಗಳ ಹಾವಳಿಯಿತ್ತು. ನಾನು ಎಪಿಎಂಸಿ ಅಧ್ಯಕ್ಷನಾಗಿದ್ದವನು. ಅಲ್ಲದೆ ನನ್ನ ಉತ್ಪನ್ನವನ್ನು ಕೊಟ್ಟಿದ್ದೇನೆ. ಹಾಗಾಗಿ, ನನಗೆ ಎಲ್ಲಾ ಗೊತ್ತಿದೆ. ನಾವು ಎಪಿಎಂಸಿ ಬಾಗಿಲು ಮುಚ್ಚಲ್ಲ, ಈಗಲೂ ಹೋಗಿ ಮಾರಾಟ ಮಾಡಬಹುದು. ಒಂದು ವೇಳೆ ವಹಿವಾಟು ಕಡಿಮೆಯಾಗಿ ಆರ್ಥಿಕ ಸಮಸ್ಯೆ ಎದುರಾದ್ರೆ ವೇತನ, ಸಾರಿಗೆ ವೆಚ್ಚಕ್ಕೆ ಕೊರತೆಯಾದ್ರೆ ಅದನ್ನು ತುಂಬಿಕೊಡಲು ಸರ್ಕಾರ ಸಿದ್ಧವಿದೆ ಎಂದು ಸಿಎಂ ಭರವಸೆ ನೀಡಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ 54 ಎಕರೆಗೆ ಸೀಮಿತವಾಗಿದೆ. ನೀರಾವರಿ ಭೂಮಿ ಕೊಂಡುಕೊಂಡ್ರೆ ಅದನ್ನು ನೀರಾವರಿಗೇ ಬಳಸಬೇಕು ಎನ್ನುವ ಷರತ್ತು ಹಾಕಲಾಗಿದೆ. ಎಸ್ಸಿ-ಎಸ್ಟಿ ಜಮೀನು ಕೊಳ್ಳಲು ಯಾರಿಗೂ ಅಧಿಕಾರ ಇಲ್ಲ. ಸಣ್ಣ, ಅತಿಸಣ್ಣ ರೈತರಿಗೂ ಸಮಸ್ಯೆಯಾಗದ ರೀತಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. 18-20 ಲಕ್ಷ ಎಕರೆ ಭೂಮಿ ಸಾಗುವಳಿ ಆಗದ ಬಂಜರು ಭೂಮಿಯಾಗಿ ಉಳಿದಿದೆ. ಈಗ ಈ ಕಾಯ್ದೆಯಿಂದ ಆ ಭೂಮಿಯಲ್ಲಿಯೂ ಕೃಷಿ ಮಾಡಬಹುದು. ಕೈಗಾರಿಕೆಗೆ ಭೂಮಿ ಅಗತ್ಯ, ಕೈಗಾರಿಕೆಗಳು ಬಂದ್ರೆ ನಿರುದ್ಯೋಗ ಸಮಸ್ಯೆ ಪರಿಹಾರವಾಗಲಿದೆ. ಇದೆಲ್ಲಾ ಮನಸ್ಸಿನಲ್ಲಿ ಟ್ಟುಕೊಂಡೇ ತಿದ್ದುಪಡಿ ತರಲಾಗಿದೆ.
ರೈತ ಸಂಘಟನೆಗಳು ಅನಾವಶ್ಯಕ ರೈತರನ್ನು ಗೊಂದಲಕ್ಕೆ ಸಿಲುಕಿಸಬಾರದು. ದೇಶದ ರೈತ ಸಮೂಹಕ್ಕೆ ಅನುಕೂಲ ಆಗಲಿ ಎಂದು ಮೋದಿ ಈ ಕಾಯ್ದೆ ತಂದಿದ್ದಾರೆ. ರೈತ ಸಮುದಾಯ ಈ ರೀತಿ ಚಳವಳಿ ಅಡ್ಡದಾರಿಗೆ ತರುವವರಿಗೆ ಮರುಳಾಗಬೇಡಿ, ನಾನು ನಿಮ್ಮೊಂದಿಗಿದ್ದೇನೆ. ನಿಮ್ಮಹಿತಕ್ಕೆ ಧಕ್ಕೆಯಾಗಲು ಬಿಡಲ್ಲ ಎನ್ನುವ ಭರವಸೆ ಕೊಡಲಿದ್ದೇನೆ ಎಂದರು.
ಬಂದ್ ಮುಗಿಸಿ ಚರ್ಚೆಗೆ ಬನ್ನಿ :25 ಲಕ್ಷಕ್ಕೂ ಕಡಿಮೆ ಆದಾಯ ಇಲ್ಲದ ಐದು ಜನರ ಕುಟುಂಬಕ್ಕೆ ಭೂಮಿ ಖರೀದಿಸುವ ಹಕ್ಕಿತ್ತು. ಈಗ ಆ ನಿಬಂಧನೆ ತೆಗೆದು ಹಾಕಿದ್ದೇವೆ. ಇದರಿಂದ ಎಲ್ಲಾ ವರ್ಗದ ಜನ ಭೂಮಿ ಖರೀದಿಸಿ ಕೃಷಿ ಮಾಡಬಹುದು. ನೀರಾವರಿ ಇಲ್ಲದ ಕಡೆ ಕೈಗಾರಿಕೆ ಮಾಡಬಹುದು. ನನ್ನಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಲ್ಲ, ಇಂದು ಚಳವಳು ಮಾಡಿ ನಂತರ ಬನ್ನಿ, ಕುಳಿತು ಚರ್ಚೆ ಮಾಡಿ ರೈತರ ಅನುಕೂಲಕ್ಕೆ ಅಗತ್ಯ ಮಾರ್ಪಾಡು ಮಾಡಲು ಸಿದ್ದನಿದ್ದೇನೆ ಎಂದು ಆಹ್ವಾನ ನೀಡಿದರು.
ಸವಿಸ್ತಾರವಾಗಿ ಆರ್. ಅಶೋಕ್ ಸದನದಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ನವರು ಇದಕ್ಕೆ ಏನೆಲ್ಲಾ ಮಾಡಿದ್ದರು ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ನವರೇ ತಿದ್ದುಪಡಿ ಮಾಡಲು ಹೊರಟಿದ್ದರು. ಆದರೆ, ಈಗ ಆ ಕೆಲಸ ನಾವು ಮಾಡಿದ್ದೇವೆ ಅಷ್ಟೇ.. ಈವರೆಗೂ ಶೇ.1ರಷ್ಟು ಭೂಮಿ ಕೈಗಾರಿಕೆಗೆ ಕೊಟ್ಟಿಲ್ಲ, ಕೈಗಾರಿಕೆಗೆ ಭೂಮಿ ಬೇಡವೇ? ಆರಂಭದಲ್ಲಿ ನಾವು ಕುಟುಂಬವೊಂದು 108 ಎಕರೆ ಖರೀದಿ ಮಾಡಲು ಅವಕಾಶ ನೀಡಬೇಕು ಎಂದು ಯೋಚಿಸಿದ್ದೆವು. ಆದರೆ, ನಂತರ ಹಿಂದೆ ಇದ್ದ ರೀತಿ 54 ಎಕರೆ ಖರೀದಿಗೆ ಸೀಮಿತಗೊಳಿಸಲಾಯಿತು. ಆದರೆ, ರೈತರಲ್ಲದವರಿಗೂ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ನ ಎಲ್ಲಾ ನಾಯಕರು ಈ ತಿದ್ದಪಡಿ ಆಗಬೇಕು ಎಂದು ಹೊರಟವರೇ ಆಗಿದ್ದವರು. ಇದರ ಕರಡು ಮಂಡಿಸಿದ್ದೇ ಕಾಂಗ್ರೆಸ್ಸಿಗರು, ಈಗ ಹೋರಾಟ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಜನರ ಮುಂದೆ ಬರಲಿ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನರ ಮುಂದೆ ಹೋಗಲು ಬೇರೆ ಯಾವುದೇ ವಿಷಯ ಇಲ್ಲ. ಹಾಗಾಗಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿಷಯ ತೆಗೆದುಕೊಂಡು ಜನರ ಬಳಿ ಹೋಗುವುದಾಗಿ ಹೇಳುತ್ತಿದ್ದಾರೆ. ಆದರೆ, ನಾನು ಈ ವಿಷಯವನ್ನು ಸದನದಲ್ಲೇ ಹೇಳಿದ್ದೆ, ಇದೇ ವಿಷಯ ತೆಗೆದುಕೊಂಡು ನಾನೂ ಹೋಗುತ್ತೇನೆ, ರಿಲಯನ್ಸ್ ಮಳಿಗೆಗೆ ರೈತರ ಉತ್ಪನ್ನ ಖರೀದಿಸಲು ಅನುಮತಿ ಕೊಟ್ಟಿದ್ದೇ ಕಾಂಗ್ರೆಸ್ಸಿಗರು, ಎಲ್ಲವನ್ನೂ ಜನರ ಮುಂದಿಡಲಿದ್ದೇವೆ. ಅಖಾಡಕ್ಕಿ ಬರಲಿ ಎಂದು ಸವಾಲೆಸೆದರು.
ಎನ್ಐಎ ಅಗತ್ಯವಿತ್ತು :ರಾಜ್ಯಕ್ಕೆ ರಾಷ್ಟ್ರೀಯ ತನಿಖಾ ದಳದ ಕೇಂದ್ರ ಮಂಜೂರು ಮಾಡುವಂತೆ ಎರಡು ಮೂರು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳುತ್ತಲೇ ಇದ್ದೆವು. ಭಯೋತ್ಪಾದಕ ಚಟುವಟಿಕೆ ಸೇರಿ ವಿವಿಧ ಕಾರಣಗಳಿಗೆ ಬೆಂಗಳೂರಿನಲ್ಲಿ ಎನ್ಐಎ ಕೇಂದ್ರದ ಅಗತ್ಯವಿದೆ. ಈಗ ಮಂಜೂರಾತಿ ಸಿಕ್ಕಿರುವುದು ಸಂತಸ ತಂದಿದೆ. ಆದರೆ, ಟೆರರಿಸ್ಟ್ ಆ್ಯಕ್ಟಿವಿಟಿ ಹಬ್ ಆಗುತ್ತಿದೆ ಎನ್ನುವ ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ಅಪಾರ್ಥ ಬೇಡ, ಘಟಕದ ಅವಶ್ಯಕತೆಯನ್ನು ಆ ರೀತಿ ಹೇಳಿದ್ದಾರಷ್ಟೇ ಎಂದರು.