ಕರ್ನಾಟಕ

karnataka

ಪ್ರಾಮಾಣಿಕವಾಗಿ ಕೆಲಸ ಮಾಡಿ, ನಾನು ನಿಮ್ಮ ಜೊತೆ ಇರುತ್ತೇನೆ: ಅಧಿಕಾರಿಗಳಿಗೆ ಸಿಎಂ ಬಿಎಸ್​ವೈ ಅಭಯ

ವಿಧಾನಸೌಧದಲ್ಲಿ ನಡೆದ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ, ಆಡಳಿತ ವಿಚಾರಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

By

Published : Aug 2, 2019, 1:07 PM IST

Published : Aug 2, 2019, 1:07 PM IST

ಬಿಎಸ್​ವೈ ಸಭೆ

ಬೆಂಗಳೂರು: ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿ.ಎಸ್​.ಯಡಿಯೂರಪ್ಪ, ಆಡಳಿತ ವಿಚಾರಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಜತೆ ಸಿಎಂ ಯಡಿಯೂರಪ್ಪ ವಿಧಾನಸೌಧದಲ್ಲಿ ಸಭೆ ನಡೆಸಿದರು. ಈ ವೇಳೆ, ಸರ್ಕಾರಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ಬರಬೇಕು. ಸರಿಯಾಗಿ ಕಡತ ವಿಲೇವಾರಿ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

ಬಿಎಸ್​ವೈ ಸಭೆ

ಬಡವರು, ದಲಿತರು ಹಾಗೂ ಶೋಷಿತರ ಉದ್ಧಾರಕ್ಕಾಗಿ ಕಾನೂನಿದೆ. ಹಾಗಾಗಿ ಅಧಿಕಾರಿಗಳು ಸರ್ಕಾರಿ ಕಚೇರಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೂ ಇರಬೇಕು. ಎರಡ್ಮೂರು ದಿನಗಳಲ್ಲಿ ಕಡತಗಳ ವಿಲೇವಾರಿ ಆಗಬೇಕು. ಬಡವರು ಕಚೇರಿಗಳಿಗೆ ಅಲೆದಾಡುವುದು ನಿಲ್ಲಬೇಕು. ಇದೇ ನಮ್ಮ ಸರ್ಕಾರದ ಆಶಯ ಎಂದು ವಿವರಿಸಿದರು.

ಸಾಮಾನ್ಯ ಜನರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸಿಗಬೇಕು. ಆಡಳಿತ ಯಂತ್ರ ಜಿಲ್ಲಾ ಮಟ್ಟದಲ್ಲಿ ಚುರುಕಾಗಿದ್ದರೆ ಜನರ ಅಲೆದಾಟ ತಪ್ಪುತ್ತದೆ. ಮುಖ್ಯ ಕಾರ್ಯದರ್ಶಿಗಳು ಕೂಡಾ ಜಿಲ್ಲಾ ಪ್ರವಾಸ ಮಾಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಿಗೆ ಎರಡು ಬಾರಿ ಜಿಲ್ಲೆಯ ಪ್ರವಾಸ ಮಾಡಬೇಕು. ಪ್ರತಿ ತಿಂಗಳು ನಾನು ಈ ಬಗ್ಗೆ ವರದಿ ಪಡೆಯುತ್ತೇನೆ ಎಂದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ ಹತೋಟಿಗೆ ಬರುವವರೆಗೂ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಶಾಸಕರ ಒತ್ತಡ, ದೂರುಗಳಿಗೆ ನೀವು ಸೊಪ್ಪು ಹಾಕುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿ. ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಅಭಯ ನೀಡಿದರು.

ಡಿಸಿಗಳು ವಿದ್ಯಾರ್ಥಿನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಊಟ, ವಸತಿ ಬಗ್ಗೆ ಪರೀಕ್ಷೆ ಮಾಡಬೇಕು. ಗಂಗಾ ಕಲ್ಯಾಣ ಯೋಜನೆಗೆ ಆದ್ಯತೆ ಮೇಲೆ ವಿದ್ಯುತ್ ಸಂಪರ್ಕ‌ ಕೊಡಬೇಕಿದೆ. ವಿದ್ಯುತ್ ಕೊಡದೇ ಇದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದರು.

ABOUT THE AUTHOR

...view details