ಕರ್ನಾಟಕ

karnataka

ETV Bharat / city

ಪುರಾತತ್ವ ಇಲಾಖೆ ಪ್ರಕಟಿತ "ಕಲಾ ವೈಭವ" ಕನ್ನಡ ಕೃತಿ ಬಿಡುಗಡೆ ಮಾಡಿದ ಸಿಎಂ - CM Yeddurappa News

ಇತಿಹಾಸದ ಗತವೈಭವವನ್ನು ಪರಿಚಯಿಸುವ ಕಲಾ ವೈಭವ ಪುಸ್ತಕ ವಿದ್ಯಾರ್ಥಿಗಳಿಗೆ, ಯುವಜನತೆಗೆ, ಇತಿಹಾಸ ಅಧ್ಯಯನಕಾರರಿಗೆ, ವಿದ್ವಾಂಸರಿಗೆ ಅಧ್ಯಯನಕ್ಕೆ ಸಹಕಾರಿಯಾಗಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

CM released the  Kala Vaibhava  book
ಪುರಾತತ್ವ ಇಲಾಖೆ ಪ್ರಕಟಿತ "ಕಲಾ ವೈಭವ" ಕನ್ನಡ ಕೃತಿ ಬಿಡುಗಡೆ ಮಾಡಿದ ಸಿಎಂ

By

Published : Nov 19, 2020, 7:02 PM IST

ಬೆಂಗಳೂರು: ವಿಶ್ವ ಪರಂಪರಾ ಸಪ್ತಾಹದ ಅಂಗವಾಗಿ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ಪ್ರಕಟಿಸಿರುವ "ಕಲಾ ವೈಭವ" ಕನ್ನಡ ಕೃತಿಯನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಡುಗಡೆ ಮಾಡಿದರು.

ನಂತರ ಮಾತನಾಡಿದ ಸಿಎಂ, ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಹೊರ ತರುತ್ತಿರುವ ಕಲಾ ವೈಭವ ಪುಸ್ತಕವನ್ನು ಅತ್ಯಂತ ಸಂತೋಷದಿಂದ ಬಿಡುಗಡೆ ಮಾಡಿದ್ದೇನೆ. ಕರ್ನಾಟಕ ರಾಜ್ಯವು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಸಮೃದ್ಧವಾಗಿರುವ ನೆಲೆಯಾಗಿದೆ. ವಿವಿಧ ಶತಮಾನಗಳಲ್ಲಿ ಕದಂಬರು, ರಾಷ್ಟ್ರಕೂಟರು, ಗಂಗರು, ಚಾಲುಕ್ಯರು ಹೀಗೆ ಹಲವಾರು ರಾಜವಂಶಗಳು ಕರ್ನಾಟಕವನ್ನು ಆಳಿದ್ದಾರೆ. ರಾಜವಂಶಗಳು ತಮ್ಮ ಆಳ್ವಿಕೆಯ ಕಾಲಗಳಲ್ಲಿ ದೇವಲಯಗಳು, ಮಸೀದಿಗಳು, ಕೊತ್ತಲ, ಬಸದಿಗಳು, ಸ್ತಂಭಗಳು ಮುಂತಾದ ಸಾಂಸ್ಕೃತಿಕ ಐತಿಹಾಸಿಕ ಕೊಡುಗೆಗಳನ್ನು ನೀಡಿವೆ ಎಂದು ಕೃತಿಯ ಐತಿಹ್ಯವನ್ನು ಹೇಳಿದರು.

ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸಾಂಸ್ಕೃತಿಕ ತಾಣಗಳಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರ್ನಾಟಕದ ಪ್ರಾಕೃತಿಕ ಹಾಗೂ ರಾಜ್ಯದಲ್ಲಿನ ಐತಿಹಾಸಿಕ ಸ್ಮಾರಕಗಳು ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಕೊಡುಗೆ ನೀಡುತ್ತಿವೆ. ಪುರಾತತ್ವ ಇಲಾಖೆಯು ರಾಜ್ಯದಲ್ಲಿ 1,300ಕ್ಕೂ ಹೆಚ್ಚು ಸ್ಮಾರಕಗಳನ್ನು ಸಂರಕ್ಷಿಸಿದೆ. ಇವುಗಳಲ್ಲಿ 765 ಸ್ಮಾರಕಗಳು ರಾಜ್ಯ ಪುರಾತತ್ವ ಇಲಾಖೆಗೆ ಸೇರಿದವಾಗಿವೆ. ಸಂರಕ್ಷಣೆ, ಜೀರ್ಣೋದ್ಧಾರ, ಉತ್ಕನನ ಮತ್ತು ವೈಜ್ಞಾನಿಕ ಅಧ್ಯಯನದ ಉದ್ದೇಶದೊಂದಿಗೆ ಬೆಂಗಳೂರು ವಲಯವು ಕರ್ನಾಟಕದ 17 ಜಿಲ್ಲೆಗಳಿಗೆ ಸೇರಿದ 133 ಸ್ಮಾರಕಗಳನ್ನು ಸಂರಕ್ಷಿಸಿದೆ ಎಂದರು.

ಐತಿಹಾಸಿಕ ಸ್ಮಾರಕಗಳ ಸಂಕ್ಷಿಪ್ತ ಮಾಹಿತಿ ಮತ್ತು ಮಹತ್ವವನ್ನು ಪರಿಚಯಿಸಲು ಕನ್ನಡದಲ್ಲಿ 'ಕಲಾ ವೈಭವ' ಕಿರುಹೊತ್ತಿಗೆಯನ್ನು ವಿಶ್ವಪರಂಪರೆ ಸಪ್ತಾಹದ ಸುಸಂದರ್ಭದಲ್ಲಿ ಹೊರ ತರುತ್ತಿರುವುದು ಶ್ಲಾಘನೀಯ. ಕೈಪಿಡಿಯು ಸರಳ ಭಾಷೆಯಲ್ಲಿದ್ದು, ಜನಸಾಮಾನ್ಯರಿಗೆ ಐತಿಹಾಸಿಕ, ರಾಷ್ಟ್ರೀಯ ಸ್ಮಾರಕಗಳ ಬಗ್ಗೆ ಅರಿವು ಮೂಡಿಸಲು ಉಪಯುಕ್ತವಾಗಲಿದೆ. ಇತಿಹಾಸದ ಗತವೈಭವವನ್ನು ಪರಿಚಯಿಸುವ ಕಲಾ ವೈಭವ ಪುಸ್ತಕ, ವಿದ್ಯಾರ್ಥಿಗಳಿಗೆ, ಯುವಜನತೆಗೆ, ಇತಿಹಾಸ ಅಧ್ಯಯನಕಾರರಿಗೆ, ವಿದ್ವಾಂಸರಿಗೆ ಅಧ್ಯಯನಕ್ಕೆ ಸಹಕಾರಿಯಾಗಲಿ ಎಂದು ಸಿಎಂ ಹಾರೈಸಿದ್ದಾರೆ.

ABOUT THE AUTHOR

...view details