ಬೆಂಗಳೂರು: ಸಭಾಪತಿಗಳ ವಿರುದ್ಧ ಎಫ್ಐಆರ್ ದಾಖಲು ಪ್ರಕರಣದಲ್ಲಿ ನಿಯಮಾವಳಿ ಪಾಲನೆಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದ್ದು, ಎಲ್ಲವನ್ನೂ ಪರಿಶೀಲಿಸಿ ಸಭಾಪತಿಗಳ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಸದಸ್ಯ ಬೋಜೇಗೌಡ, ದೂರು ಸಭಾಪತಿಗಳ ವಿರುದ್ಧ ಬಂದಿದೆ. ಪೂರ್ವಾನುಮತಿ ಪಡೆಯದೇ ಎಫ್ಐಆರ್ ದಾಖಲು ಮಾಡಿದ್ದು ಸರಿಯಲ್ಲ, ಸಭಾಪತಿ ಅವರಿಗೇ ಈ ರೀತಿ ಆಗಿರುವುದು ಸರಿಯಲ್ಲ, ಕೂಡಲೇ ತನಿಖಾಧಿಕಾರಿ ವಿರುದ್ಧ ಕ್ರಮ ಆಗಲೇಬೇಕು. ಜಾತಿನಿಂದನೆ ಕೇಸ್ನಲ್ಲಿ ಎಸ್ಐ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅವರಿಗೂ ಇದಕ್ಕೂ ಏನು ಸಂಬಂಧ ಬರಲಿದೆ. ಸಂಬಂಧಪಟ್ಟ ಅಧಿಕಾರಿ ಅಮಾನತುಗೊಳಿಸಿ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ನಲ್ಲಿ ಸಭಾಪತಿ ವಿರುದ್ಧ ಎಫ್ಐಆರ್ ದಾಖಲು ಪ್ರಕರಣದ ಕುರಿತು ಚರ್ಚೆ ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಾತನಾಡಿ, ಈ ಪ್ರಕರಣದಲ್ಲಿ ದಲಿತ ಎಸ್ಐನ ಅಮಾನತುಗೊಳಿಸಲಾಗಿದೆ. ಬಲಿಪಶು ಮಾಡಲಾಗಿದೆ. ಯಾರೋ ಒಬ್ಬ ಹರಕೆಯ ಕುರಿ ಸಿಕ್ಕ ಎಂದು ಮಾಡುವುದು ಸರಿಯಲ್ಲ, ನಿಜವಾದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಎಫ್ಐಆರ್ ದಾಖಲಾದರೆ ಎಷ್ಟು ಸಮಯದಲ್ಲಿ ಎಸ್ಪಿ ಕಚೇರಿಗೆ ಮಾಹಿತಿ ಹೋಗಲಿದೆ?. ಯಾಕೆ ಎಸ್ಪಿ ತನಿಖೆಗೆ ಆದೇಶಿಸಲಿಲ್ಲ?. ಗೃಹ ಸಚಿವರ ಗಮನಕ್ಕಾದರೂ ತರಬಹುದಿತ್ತು. ಆದರೆ ಅವರು ಆ ಕೆಲಸವನ್ನೂ ಮಾಡಿಲ್ಲ, ಎಸ್ಪಿ ಜವಾಬ್ದಾರಿ ಕೂಡ ಇದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಸಭಾಪತಿ ಸ್ಥಾನ ಬಹಳ ಮುಖ್ಯ, ರಾಜ್ಯಪಾಲರ ನಂತರದ ಸ್ಥಾನ ಅದು. ಸಾಂವಿಧಾನಿಕ ಹುದ್ದೆಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ನಿಯಮ ಪಾಲಿಸಬೇಕು, ಅದಕ್ಕಾಗಿಯೇ ಪ್ರೋಟೋಕಾಲ್ ಇದೆ. ಈ ಕೇಸ್ನಲ್ಲಿ ನಿಯಮಗಳು ಫಾಲೋ ಆಗಿಲ್ಲ. ಹಾಗಾಗಿ ಎಫ್ಐಆರ್ ದಾಖಲಿಸಿದ್ದವರ ವಿರುದ್ಧ ಕ್ರಮ ಆಗಿದೆ. ಹಾಗಾಗಿ ಎಲ್ಲ ಪರಿಶೀಲಿಸಲಾಗುತ್ತಿದೆ. ಸಭಾಪತಿ ಹುದ್ದೆ ಘನತೆ ಎತ್ತಿ ಹಿಡಿದು ಮತ್ತೆ ಇಂತಹ ಘಟನೆ ಮರುಕಳಿಸದಂತೆ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸಭಾಪತಿ ಸ್ಥಾನಮಾನ ಕಾಪಾಡುವುದು ನಮ್ಮ ಬದ್ದತೆ, ಸದನದ ಬದ್ದತೆ, ಈಗಾಗಲೇ ನಾವು ತನಿಖೆ ಮಾಡಿದ್ದೇವೆ, ಎಸ್ಐ ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದರು.
ಇದನ್ನೂ ಓದಿ:ಈಗ ಬೆದರಿಕೆಗೆ ಮಣಿಯುವ ಸರ್ಕಾರ ಇಲ್ಲ, ಈಗ ಇರುವುದು ಬಿಜೆಪಿ ಗವರ್ನಮೆಂಟ್: ಸಿ.ಟಿ.ರವಿ