ಬೆಂಗಳೂರು: ಜೀವನದಲ್ಲಿ ಹಿಂದೆ ಮಾಡಿದ್ದ ತಪ್ಪಿನ ಅರಿವಾಗಿದೆ. ಹಾಗಾಗಿ, ಸಿಡಿಯಂತಹ ಷಡ್ಯಂತ್ರದಲ್ಲಿ ಸಿಲುಕುವ ವ್ಯಕ್ತಿ ನಾನಲ್ಲ. ನಾನು ಯಾವುದೇ ಬ್ಲಾಕ್ ಮೇಲ್ಗಳಿಗೂ ಹೆದರಲ್ಲ, ವಿಚಲಿತನಾಗುವುದೂ ಇಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹಳೆ ಪ್ರಕರಣವನ್ನು ಉಲ್ಲೇಖಿಸಿ ಸಿಡಿ ಕೇಸ್ ಇದೆ ಎಂದು ಬರುತ್ತಿರುವ ಸುದ್ದಿಗಳನ್ನು ತಿರಸ್ಕರಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಸೇರಿದಂತೆ ಯಾವುದೇ ಷಡ್ಯಂತ್ರಕ್ಕೂ ನಾನು ಹೆದರುವುದಿಲ್ಲ. ಹಿಂದೆ ಜೀವನದಲ್ಲಿ ಯಾವ ತಪ್ಪು ಮಾಡಿದ್ದೆ, ಆ ತಪ್ಪಿನ ಅರಿವು ನನಗಾಗಿದೆ. ಹಾಗಾಗಿ ಷಡ್ಯಂತ್ರಕ್ಕೆ ಒಳಗಾಗುವ ವ್ಯಕ್ತಿ ನಾನಲ್ಲ. ನಾನು ತಪ್ಪು ಮಾಡಿದ್ರೆ, ನನ್ನ ಕುಟುಂಬ ಸದಸ್ಯರು ಕೇಳುತ್ತಾರೆ. ಶಿಕ್ಷ ಕೊಡುತ್ತಾರೆ ಎಂದರು.
ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ, ಈ ರಾಜಕಾರಣದಲ್ಲಿ ರೇಣುಕಾಚಾರ್ಯ ಯಾವತ್ತೂ ಅದೆಕ್ಕೆಲ್ಲಾ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ನಾನು ನಾನಾಗಿಯೇ ಇರುತ್ತೇನೆ, ಯಾವತ್ತೂ ವಿಚಲಿತನಾಗಿಲ್ಲ. ಒಂದು ವೇಳೆ ನಾನು ತಪ್ಪು ಮಾಡಿದರೆ, ಆ ತಪ್ಪಿನ ಅರಿವನ್ನು ಅರಿತುಕೊಂಡು ನಾನೊಬ್ಬ ಪ್ರಬುದ್ಧ ಮನುಷ್ಯನಾಗಿ ರಾಜಕಾರಣ ಮಾಡುತ್ತೇನೆಯೇ ಹೊರತು ಬ್ಲಾಕ್ ಮೇಲ್ ತಂತ್ರಗಾರಿಕೆ ಯಾವತ್ತೂ ನನ್ನ ಬಳಿ ನಡೆಯುವುದಿಲ್ಲ ಎಂದರು.