ಬೆಂಗಳೂರು: ರಾಜ್ಯದಲ್ಲಿನ ಕೊರೊನಾ ಸ್ಥಿತಿಗತಿಗಳ ಕುರಿತು ನಾಳೆ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದ ನಡೆಸಲಿದ್ದು, ನಂತರ ಕೋವಿಡ್ ಜವಾಬ್ದಾರಿ ಹೊತ್ತ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಲಾಕ್ಡೌನ್ ಜಾರಿಯಲ್ಲಿದ್ದು, ಕಠಿಣ ಮಾರ್ಗಸೂಚಿ ನಂತರದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಕುರಿತು ಜಿಲ್ಲಾಡಳಿತಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ನಾಳೆ ಇಡೀ ದಿನ ಕೊರೊನಾ ಸಂಬಂಧಿತ ಕಾರ್ಯಚಟುವಟಿಕೆಯಲ್ಲಿ ತೊಡಗಲಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಕೆಂಗೇರಿಯ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಿ.ಜಿ.ಎಸ್. ಮೆಡಿಕಲ್ ಕಾಲೇಜ್ನಲ್ಲಿ ಬಿ.ಜಿ.ಎಸ್, ಗ್ಲೋಬಲ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ಹಾಸ್ಪಿಟಲ್ ಸಂಸ್ಥೆಯ ವತಿಯಿಂದ 210 ಹಾಸಿಗೆಗಳು (ಆಮ್ಲಜನಕ ಸೌಲಭ್ಯವುಳ್ಳ), 43 ಐಸಿಯು ಹಾಸಿಗೆಗಳು (23 ವೆಂಟಿಲೇಟರ್ ಸೌಲಭ್ಯವುಳ್ಳ) 30 ಹೆಚ್‌ಡಿಯು ಹಾಸಿಗೆಗಳು ಹಾಗೂ 100 ಸಾಮಾನ್ಯ ಹಾಸಿಗೆಗಳ (ಆಮ್ಲಜನಕ ಸೌಲಭ್ಯವಿಲ್ಲದ್ದು) ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಮತ್ತು ಸಾರ್ವಜನಿಕ ಸೇವೆಗೆ ಒದಗಿಸುವುದು ಹಾಗೂ ಮೈಸೂರಿನ ಹಸಿರು ಪ್ರತಿಷ್ಠಾನದ ವತಿಯಿಂದ ಎರಡು ಸಾವಿರ ಸಸಿಗಳನ್ನು ಶ್ರೀ ಮಠಕ್ಕೆ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಜಿಂದಾಲ್ ಸ್ಟೀಲ್ ಸಂಸ್ಥೆಯ ವತಿಯಿಂದ1000 ಹಾಸಿಗೆಗಳ ಆಮ್ಲಜನಕ ಸೌಲಭ್ಯವುಳ್ಳ “ಕೋವಿಡ್ ಕೇರ್ ಫೀಲ್ಡ್ ಸೆಂಟರ್”ನ ಉದ್ಘಾಟನೆ ಮತ್ತು ಸಾರ್ವಜನಿಕ ಸೇವೆಗೆ ಒದಗಿಸುವ ಕಾರ್ಯಕ್ರಮವನ್ನು ಗೃಹ ಕಚೇರಿ ಕೃಷ್ಣಾದಿಂದ ಅನ್‌ಲೈನ್ ಮೂಲಕ ಸಿಎಂ ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ.
ಸಂಜೆ 4.30ಕ್ಕೆ ಕೋವಿಡ್-19 (ಕೊರೊನಾ ವೈರಾಣು) ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರುಗಳೊಂದಿಗೆ ಗೃಹ ಕಚೇರಿ ಕೃಷ್ಣಾದಿಂದ ಸಿಎಂ ವಿಡಿಯೋ ಸಂವಾದ ನಡೆಸಲಿದ್ದಾರೆ. ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ಚರ್ಚೆ ನಡೆಸಲಿದ್ದಾರೆ. ಸೋಂಕಿನ ಪ್ರಮಾಣ ಇಳಿಕೆ ಸಂಬಂಧ ಸಲಹೆ ಸೂಚನೆ ನೀಡಲಿದ್ದಾರೆ.
ಸಂಜೆ 6.30ಕ್ಕೆ ಅಧಿಕೃತ ನಿವಾಸ ಕಾವೇರಿಯಲ್ಲಿ ಕೋವಿಡ್-19 (ಕೊರೋನಾ ವೈರಾಣು) ವಿಷಯಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮತ್ತು ಚರ್ಚೆ ನಡೆಸಲಾಗುತ್ತದೆ. ಲಾಕ್ಡೌನ್ ನಂತರದ ಬೆಳವಣಿಗೆ, ಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ ಮತ್ತಷ್ಟು ಸಮಯ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.