ಬೆಂಗಳೂರು: ಮೇಕೆದಾಟು ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚೆಗಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಮಯಾವಕಾಶ ಕೋರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸಕ್ಕೂ ಮೊದಲು ರಾಜ್ಯದ ನೀರಾವರಿ ನಿಗಮಗಳ ಆಡಳಿತ ಮಂಡಳಿಗಳ ಸಭೆ ಕರೆದಿದ್ದು, ಯೋಜನೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇಂದು ಸಂಜೆ ಗೃಹ ಕಚೇರಿ ಕೃಷ್ಣಾದಲ್ಲಿ ನೀರಾವರಿ ನಿಗಮಗಳ ಜೊತೆ ಅವರು ಸರಣಿ ಸಭೆ ನಡೆಸುವರು. ಇದಾದ ನಂತರ, ಕಾವೇರಿ ನೀರಾವರಿ ನಿಗಮದ ಸಭೆ ನಡೆಸಲಿದ್ದಾರೆ.
ಇದರೊಂದಿಗೆ ನಿಗಮದ ವಾರ್ಷಿಕ ಸಾಮಾನ್ಯ ಸಭೆಯನ್ನೂ ನಡೆಸಲಿದ್ದಾರೆ. ಬಳಿಕ ಸಿಎಂ ವಿಶ್ವೇಶ್ವರಯ್ಯ ಜಲ ನಿಗಮದ ಸಭೆ ನಡೆಸುವರು. ಪ್ರಸ್ತುತ ನೀರಾವರಿ ಯೋಜನೆ ಕಾಮಗಾರಿಗಳ ಪ್ರಗತಿ, ಕೇಂದ್ರದಿಂದ ಸಿಗಬೇಕಿರುವ ನೆರವು, ಸೌಲಭ್ಯ, ಅನುಮತಿಗಳ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಮೇಕೆದಾಟು ಯೋಜನೆ ಕುರಿತು ಮಹತ್ವದ ಮಾತುಕತೆ ನಡೆಸಲು ದೆಹಲಿಗೆ ತೆರಳಲಿರುವ ಬೊಮ್ಮಾಯಿ, ಇದರ ಜೊತೆಗೆ ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ಭೂಸ್ವಾಧೀನ, ಮಹಾದಾಯಿ ಯೋಜನೆ, ಭದ್ರ ಮೇಲ್ದಂಡೆ ರಾಷ್ಟ್ರೀಯ ಯೋಜನೆ ಸೇರಿ ಕೃಷ್ಣಾ,ಕಾವೇರಿ ಕೊಳ್ಳದ ಯೋಜನೆಗಳ ಕುರಿತು ಮಾತುಕತೆ ನಡೆಸುವರು.