ಬೆಂಗಳೂರು: ರಾಜ್ಯಾದ್ಯಂತ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಹಾನಿಗೆ ಕಳೆದ ವರ್ಷ ನೀಡಿದ ರೀತಿಯಲ್ಲಿಯೇ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಕ್ಷಣ ಪರಿಹಾರವಾಗಿ 10 ಸಾವಿರ ರೂ. ನೀಡಬೇಕು. ಮನೆ ಪೂರ್ಣ ಹಾನಿಯಾಗಿದ್ದರೆ 5 ಲಕ್ಷ ಪರಿಹಾರ, ಭಾಗಶಃ ಹಾನಿಯಾಗಿದ್ದರೆ ಹಾನಿಗೆ ಅನುಗುಣವಾಗಿ ಪರಿಹಾರ ವಿತರಿಸಬೇಕು ಎಂದು ಸೂಚಿಸಿದ್ದಾರೆ.
ಈಗಾಗಲೇ ಕೊರೊನಾಗಾಗಿ ಜಿಲ್ಲಾ ಕೇಂದ್ರಗಳ ಹಾಸ್ಟೆಲ್ ಶಾಲಾ-ಕಾಲೇಜುಗಳನ್ನು ಬಳಸಿಕೊಳ್ಳಲಾಗಿದೆ. ಹಾಗಾಗಿ ಹಳ್ಳಿಗಳಲ್ಲಿರುವ ಶಾಲಾ-ಕಾಲೇಜುಗಳನ್ನು ನಿರಾಶ್ರಿತರ ಕೇಂದ್ರವಾಗಿ ಮಾಡಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.
ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಸಮೀಕ್ಷೆ ಮಾಡಿ ವರದಿ ಕೊಡಬೇಕು. ಪ್ರತಿದಿನ ಒಟ್ಟು ಹಾನಿಯ ಬಗ್ಗೆ ವರದಿ ಕೊಡಬೇಕು ಎಂದಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಎಂ, ಅಲ್ಲಿಂದಲೇ ಅಧಿಕಾರಿಗಳಿಗೆ ಸಲಹೆ ಸೂಚನೆ, ನಿರ್ದೇಶನ ನೀಡುವುದನ್ನು ಮುಂದುವರೆಸಿದ್ದಾರೆ.