ಕರ್ನಾಟಕ

karnataka

By

Published : Oct 12, 2019, 7:54 PM IST

ETV Bharat / city

ಚರ್ಚೆ ನಡೆಯದೇ ಬಜೆಟ್​​​​ ಅಂಗೀಕಾರ: ವಿಷಾದ ವ್ಯಕ್ತಪಡಿಸಿದ ಸಿಎಂ

ಬಜೆಟ್ ಮೇಲೆ ಚರ್ಚೆ ನಡೆಯದೇ ಅಂಗೀಕಾರವಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.

ವಿಧಾನಸಭೆಯ ಕಲಾಪ

ಬೆಂಗಳೂರು: ಬಜೆಟ್ ಮೇಲೆ ಚರ್ಚೆ ನಡೆಯದೇ ಅಂಗೀಕಾರವಾಗುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು.

ವಿಧಾನಸಭೆಯ ಕಲಾಪ

ವಿಧಾನಸಭೆಯ ಕಲಾಪದ ಆರಂಭದಲ್ಲಿ ಬಜೆಟ್ ಅಂಗೀಕಾರದ ಪ್ರಸ್ತಾವನೆ ಕೈಗೆತ್ತಿಕೊಂಡಾಗ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ಆಕ್ಷೇಪ ವ್ಯಕ್ತಪಡಿಸಿದರು. ನಿಯಮ 178ರ ಅನುಸಾರ ವಿತ್ತೀಯ ಕಲಾಪದಲ್ಲಿ ಅನುದಾನದ ಬೇಡಿಕೆಗಳನ್ನು ಮತಕ್ಕೆ ಹಾಕುವುದಾದರೆ ಕನಿಷ್ಠ 15 ದಿನ ಚರ್ಚೆ ನಡೆಯಬೇಕು. 15 ದಿನ ಪೂರ್ಣಗೊಂಡ ನಂತರ ಚರ್ಚೆ ಅಪೂರ್ಣವಾಗಿದ್ದರೂ ಅಂದು ಸಂಜೆ ಮತ ಹಾಕಲು ಅವಕಾಶ ಇದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಕೇವಲ ಮೂರು ದಿನ ಮಾತ್ರ ಅಧಿವೇಶನ ನಡೆದಿದೆ. ಒಂದೇ ದಿನದಲ್ಲಿ ಚರ್ಚಿಸಿ ಅಂಗೀಕಾರ ಪಡೆಯಲು ಸರ್ಕಾರ ಮುಂದಾಗಿರುವುದು ಸರಿಯಲ್ಲ. ಸದನದ ಹಕ್ಕು ಚ್ಯುತಿಯಾಗುತ್ತದೆ. ನಾವು ಹಕ್ಕು ಚ್ಯುತಿಯನ್ನು ಮಂಡಿಸುವುದಿಲ್ಲ. ಆದರೆ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಈ ಹಿಂದಿನ ಸರ್ಕಾರಗಳು ಇದೇ ರೀತಿ ಅಧಿವೇಶನ ನಡೆಸಿವೆ. ನಾವು 10 ದಿನಗಳ ಕಾಲ ಅಧಿವೇಶನ ನಡೆಸಬೇಕೆಂಬ ಆಸಕ್ತಿ ಹೊಂದಿದ್ದೆವು. ಆದರೆ 17 ಕ್ಷೇತ್ರಗಳಿಗೆ ಉಪ ಚುನಾವಣೆಗಳು ಘೋಷಣೆಯಾಗಿವೆ. ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿದೆ. ಇದರಿಂದಾಗಿ ಅಧಿವೇಶನದ ಅವಧಿಯನ್ನು ಮೂರು ದಿನಕ್ಕೆ ಮೊಟಕುಗೊಳಿಸಬೇಕಾಯಿತು ಎಂದು ಸಮರ್ಥಿಸಿಕೊಂಡರು.

ಶಾಸಕ ಕೃಷ್ಣಬೈರೇಗೌಡ ಅವರ ಬೆಂಬಲಕ್ಕೆ ನಿಂತ ಮಾಜಿ ಸಿಎಂ ಸಿದ್ದರಾಮಯ್ಯ, ಸಂವಿಧಾನದ 177ನೇ ವಿಧಿ ಸಾಮಾನ್ಯ ಬಜೆಟ್ ಮೇಲಿನ ಚರ್ಚೆ, 178ನೇ ವಿಧಿ ಬೇಡಿಕೆಗಳ ಮೇಲಿನ ಚರ್ಚೆ ಕುರಿತು ವಿವರಣೆ ನೀಡುತ್ತದೆ. ಯಾವೆಲ್ಲ ವಿಷಯಗಳು ಚರ್ಚೆಯಾಗಬೇಕು ಎಂಬ ಬಗ್ಗೆ ನಿಯಮದಲ್ಲಿ ಸ್ಪಷ್ಟವಾಗಿದೆ. ಈ ಸರ್ಕಾರ ನಿಯಮಗಳನ್ನು ಮುರಿದು ಹೊಸ ಸಂಪ್ರದಾಯಗಳನ್ನು ಹುಟ್ಟು ಹಾಕುತ್ತಿದೆ. ಸದನ ಕ್ರಮಬದ್ಧವಾಗಿಲ್ಲದ ಸಂದರ್ಭದಲ್ಲಿ ಅಥವಾ ಅನಿವಾರ್ಯವಾಗಿ ಸಮಯದ ಕೊರತೆ ಉಂಟಾದಾಗ ಚರ್ಚೆ ಇಲ್ಲದೆ ಬೇಡಿಕೆಗಳ ಮೇಲಿನ ಪ್ರಸ್ತಾವನೆ ಅಂಗೀಕರಿಸಿದ ಉದಾಹರಣೆಗಳಿವೆ. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಆದರೂ ಸರ್ಕಾರ 10 ದಿನ ಕಲಾಪ ನಡೆಸಲು ಇಚ್ಛಿಸದೆ ಮೊಂಡು ವಾದಕ್ಕೆ ಅಂಟಿಕೊಂಡಿತ್ತು. ಸ್ಪೀಕರ್ ಕೂಡ ಅದನ್ನು ಬೆಂಬಲಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.

28 ಇಲಾಖೆಗಳ ಬೇಡಿಕೆಗಳನ್ನು ಒಂದೇ ದಿನದಲ್ಲಿ ಮಂಡಿಸಲಾಗಿದೆ. ಇಲಾಖೆಗಳ ವಾರ್ಷಿಕ ವರದಿಯನ್ನು ಸರಿಯಾಗಿ ತಲುಪಿಸಿಲ್ಲ. ಒಂದೇ ದಿನ 28 ಇಲಾಖೆಗಳ ವರದಿಗಳನ್ನು ಓದಿ ಚರ್ಚೆ ಮಾಡಲು ಕಷ್ಟವಾಗುತ್ತದೆ. ಸರ್ಕಾರ ಈ ರೀತಿಯ ನಡವಳಿಕೆಗಳನ್ನು ಅನುರಿಸಬಾರದು. ಇದನ್ನೇ ಮುಂದುವರೆಸಬಾರದು ಎಂದು ಗಂಭೀರ ಸಲಹೆ ನೀಡಿದರು.

ಈ ವೇಳೆ ಉತ್ತರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಹೀಗೆ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುತ್ತೇವೆ. ಸಹಕಾರ ಕೊಡಿ ಎಂದರು. ಆಗ ಕೃಷ್ಣಬೈರೇಗೌಡ, ನಾನು ನಿಯಮಗಳಲ್ಲಿ ಏನಿದೆ ಎಂದಷ್ಟೇ ಹೇಳಿದ್ದೇನೆ. ಕ್ರಿಯಾಲೋಪ ಎತ್ತಿ, ರೂಲಿಂಗ್ ಕೇಳಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿಲ್ಲ. ಹಣಕಾಸಿನ ವಿಷಯ ಬಂದಾಗ ಸರ್ಕಾರಕ್ಕೆ ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದರು.

ABOUT THE AUTHOR

...view details