ಬೆಂಗಳೂರು :ಉಡುಪಿಯ ಕಾಪು ಬಳಿ ಅರಬ್ಬೀ ಸಮುದ್ರದಲ್ಲಿ ಟಗ್ ಬೋಟ್ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ಸುರಕ್ಷಿತವಾಗಿ ಕರೆ ತಂದಿರುವ ರಕ್ಷಣಾ ಸಿಬ್ಬಂದಿಗೆ ಸಿಎಂ ಬಿಎಸ್ವೈ ಟ್ವೀಟ್ ಮೂಲಕ ಕೃತಜ್ಞತೆ ತಿಳಿಸಿದ್ದಾರೆ.
'ಅರಬ್ಬೀ ಸಮುದ್ರದಲ್ಲಿ ಟಗ್ನಲ್ಲಿ ಸಿಲುಕಿದ್ದ 9 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಕಾರ್ಯಾಚರಣೆ ನಡೆಸಿದ ಕೋಸ್ಟ್ ಗಾರ್ಡ್ ಹಾಗೂ ನೌಕಾಪಡೆಗೆ ಧನ್ಯವಾದಗಳು.
ಇಂದು ಮುಂಜಾನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ರಕ್ಷಿಸಲಾಗಿದೆ. ಕಾರ್ಮಿಕರ ಆರೋಗ್ಯದ ತಪಾಸಣೆ ಸೇರಿದಂತೆ ಎಲ್ಲ ಅಗತ್ಯ ನೆರವು ಒದಗಿಸಲಾಗುತ್ತಿದೆ' ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಓದಿ : ಉಡುಪಿ: 40 ಗಂಟೆಯಿಂದ ಸಮುದ್ರದಲ್ಲಿ ಸಿಲುಕಿದ್ದ 9 ಮಂದಿಯ ರಕ್ಷಣೆ
ತೌಕ್ತೆ ಚಂಡಮಾರುತದಿಂದ ಅಲೆಗಳ ಹೊಡೆತಕ್ಕೆ ಸಿಲುಕಿ ಕೋರಮಂಡಲ ಟಗ್ ಬೋಟ್ ಉಡುಪಿಯ ಕಾಪು ದೀಪಸ್ತಂಭಂದ ಸಮೀಪ ಸಮುದ್ರದಲ್ಲಿ ಸಿಲುಕಿಕೊಂಡಿತ್ತು.
ಅದರಲ್ಲಿದ್ದ 9 ಮಂದಿ ಮಂಗಳೂರಿನ ಎಂಆರ್ಪಿಎಲ್ನ ಗುತ್ತಿಗೆ ನೌಕರರು ತಮ್ಮನ್ನು ರಕ್ಷಣೆ ಮಾಡುವಂತೆ ಕರಾವಳಿ ಕಾವಲುಪಡೆ ಸಿಬ್ಬಂದಿಗೆ ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದರು.
ಹವಾಮಾನ ವೈಪರೀತ್ಯದಿಂದ ಕಾರ್ಯಾಚರಣೆ ವಿಳಂಬವಾದರೂ ಎಲ್ಲರನ್ನೂ ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಸುಮಾರು 40 ಗಂಟೆಗಳ ಸೆಣಸಾಟದ ಬಳಿಕ ಎಲ್ಲಾ 9 ಮಂದಿ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.