ಬೆಂಗಳೂರು :ಆಪರೇಶನ್ ಕಮಲದ ಮೂಲಕ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪತನಗೊಳಿಸಿ, ಉಪಚುನಾವಣೆಯಲ್ಲಿ ವಲಸಿಗ ಶಾಸಕರನ್ನು ಗೆಲ್ಲಿಸಿಕೊಂಡು, ಹೆಜ್ಜೆಹೆಜ್ಜೆಗೂ ಸವಾಲುಗಳನ್ನು ಎದುರಿಸಿ, ರಾಜಕೀಯ ಹೋರಾಟದಿಂದ ಅಧಿಕಾರ ದಕ್ಕಿಸಿಕೊಂಡಿದ್ದ ಮುಖ್ಯಮಂತ್ರಿ ಪದವಿಗೆ ಸಿಎಂ ಯಡಿಯೂರಪ್ಪ ಸ್ವಪ್ರೇರಣೆಯಿಂದ ವಿದಾಯ ಹೇಳುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇದು ಅಚ್ಚರಿಯ ಸಂಗತಿಯಾದರೂ ನಂಬಲೇಬೇಕು. ರಾಜಕೀಯ ಹೋರಾಟದ ಮೂಲಕ ಪಡೆದುಕೊಂಡಿದ್ದ ಮುಖ್ಯಮಂತ್ರಿ ಹುದ್ದೆಯನ್ನು ಯಡಿಯೂರಪ್ಪನವರು ಬಿಜೆಪಿಯ ಹೈಕಮಾಂಡ್ನ ಯಾವುದೇ ಒತ್ತಡವಿಲ್ಲದೇ ಸ್ವಯಂ ನಿರ್ಧಾರದಿಂದ ಬಿಟ್ಟುಕೊಡುತ್ತಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗುತ್ತದೆ ಎನ್ನುವ ವದಂತಿಗಳು ಕಳೆದ ಒಂದು ವರ್ಷದಿಂದಲೂ ಬಲವಾಗಿ ಕೇಳಿ ಬರುತ್ತಿತ್ತು. ಹಿಂದೆ ನಾಯಕತ್ವ ಬದಲಾವಣೆ ಪ್ರಶ್ನೆ ಕೇಳಿ ಬಂದಾಗಲೆಲ್ಲಾ ಯಡಿಯೂರಪ್ಪನವರು ಅದನ್ನು ಅಲ್ಲಗಳೆಯುತ್ತಿದ್ದರು. ಅಷ್ಟೇ ಅಲ್ಲ, ತಾವೇ ಪೂರ್ಣಾವಧಿ ತನಕ ಸಿಎಂ ಆಗಿರುವುದಾಗಿ ಆತ್ಮವಿಶ್ವಾಸದಿಂದ ಹೇಳುತ್ತಿದ್ದರು.
ಅಷ್ಟೇ ಏಕೆ, ಇತ್ತೀಚೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವ ಬದಲಾವಣೆ ಗೊಂದಲ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದಾಗಲೂ ಸಹ ಯಡಿಯೂರಪ್ಪನವರು ಸಿಎಂ ಆಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ.
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದರು. ಅದಾಗಿ ಕೆಲವೇ ದಿನಗಳ ಅಂತರದಲ್ಲಿ ದೆಹಲಿಗೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ಬಂದ ಬೆನ್ನಲ್ಲಿಯೇ ಮುಖ್ಯಮಂತ್ರಿ ಪದವಿಗೆ ಯಡಿಯೂರಪ್ಪ ರಾಜೀನಾಮೆ ನೀಡಲಿದ್ದಾರೆನ್ನುವ ಸುದ್ದಿ ದಟ್ಟವಾಗಿ ಹರಡಿದೆ.
ಹೈಕಮಾಂಡ್ಗೆ ಸ್ವಯಂ ನಿರ್ಧಾರ ತಿಳಿಸಿದ ಬಿಎಸ್‌ವೈ!