ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕರ್ಫ್ಯೂ ನಡುವೆಯೂ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ತುರ್ತು ಸಭೆ ಕರೆದಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಸಂಜೆ 4.30ಕ್ಕೆ ಸಿಎಂ ಸಭೆ ಕರೆದಿದ್ದು, ಸಭೆಯಲ್ಲಿ ಸರ್ಕಾರಕ್ಕೆ ನಿಗದಿತ ಸಂಖ್ಯೆಯ ಬೆಡ್ ನೀಡಿಕೆ ಕುರಿತು ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಶೇ.50 ರಷ್ಟು ಬೆಡ್ ನೀಡುವಂತೆ ಸರ್ಕಾರ ಸೂಚನೆ ನೀಡಿದ್ದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಬೆಡ್ಗಳು ಸರ್ಕಾರಕ್ಕೆ ಲಭ್ಯವಾಗಿಲ್ಲ. ಹೀಗಾಗಿ ಬೆಡ್ ಕೊರತೆ ಮುಂದುವರೆದಿದ್ದು, ಕೋವಿಡ್ ಸೋಂಕಿತರ ಪರದಾಟ ತಪ್ಪಿಸಲು ನಾಳೆ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಿಎಂ ಸಮಾಲೋಚನೆ ನಡೆಸಲಿದ್ದಾರೆ.
ಇನ್ನು ಆಮ್ಲಜನಕ ಸಿಲಿಂಡರ್ಗಳ ಪೂರೈಕೆಯಲ್ಲಿನ ವ್ಯತ್ಯಯ ಕುರಿತು ನಾಳೆ ಚರ್ಚೆ ನಡೆಯಲಿದೆ. ಖಾಸಗಿ ಆಸ್ಪತ್ರೆಗಳಿಗೆ ಅಗತ್ಯ ಪ್ರಮಾಣದ ಆಮ್ಲಜನಕ ಸರಬರಾಜಾಗುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಆಮ್ಲಜನಕ ಪೂರೈಕೆಗೆ ಇರುವ ಸಮಸ್ಯೆ ನಿವಾರಿಸುವ ಮಾತುಕತೆ ನಡೆಯಲಿದೆ. ಬೇಡಿಕೆ ಹಾಗೂ ಪೂರೈಕೆ ನಡುವೆ ಹೊಂದಾಣಿಕೆ ಮಾಡುವ ಕುರಿತು ಚರ್ಚೆ ನಡೆಯಲಿದೆ.
ಬಹುಮುಖ್ಯವಾಗಿ ನಾಳೆ ರೆಮ್ಡೆಸಿವಿರ್ ಔಷಧ ಕುರಿತು ಚರ್ಚೆ ನಡೆಯಲಿದೆ. ಸದ್ಯ ರೆಮ್ಡೆಸಿವಿರ್ ಔಷಧ ಕೊರತೆ ಕಾಣಿಸಿದ್ದು, ಸರ್ಕಾರವೇ ನೇರವಾಗಿ ಔಷಧ ಖರೀದಿಸಿ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ ಮಾಡುತ್ತಿದೆ. ಆದರೆ, ಅಗತ್ಯ ಇಲ್ಲದವರಿಗೂ ರೆಮ್ಡೆಸಿವಿರ್ ಕೊಡುತ್ತಿದ್ದು, ಇದರಿಂದ ಅಗತ್ಯ ಇರುವ ಗಂಭೀರ ಸ್ವರೂಪದ ಸೋಂಕಿತರಿಗೆ ಸಿಗುತ್ತಿಲ್ಲ. ಈ ಬಗ್ಗೆಯೂ ಸಿಎಂ ಪ್ರಸ್ತಾಪ ಮಾಡಲಿದ್ದು, ಅಗತ್ಯವಿರುವ ರೋಗಿಗಳಿಗೆ ಮಾತ್ರ ರೆಮ್ಡೆಸಿವಿರ್ರ್ ನೀಡುವಂತೆ ಸಲಹೆ ನೀಡಲಿದ್ದಾರೆ ಎನ್ನಲಾಗಿದೆ.
ರಾಜ್ಯದಲ್ಲಿ ಕೊರೊನಾ ಅಬ್ಬರ: ಖಾಸಗಿ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ನಾಳೆ ಸಿಎಂ ತುರ್ತು ಸಭೆ - ಯಡಿಯೂರಪ್ಪ ತುರ್ತುಸಭೆ
ಗೃಹ ಕಚೇರಿ ಕೃಷ್ಣಾದಲ್ಲಿ ಶನಿವಾರ ಸಂಜೆ 4.30ಕ್ಕೆ ಸಿಎಂ ಸಭೆ ಕರೆದಿದ್ದು, ಸಭೆಯಲ್ಲಿ ಸರ್ಕಾರಕ್ಕೆ ನಿಗದಿತ ಸಂಖ್ಯೆಯ ಬೆಡ್ ನೀಡಿವ ಕುರಿತು ಮಾತುಕತೆ ನಡೆಸಲಿದ್ದಾರೆ.
cm bsy