ಕರ್ನಾಟಕ

karnataka

ETV Bharat / city

2 ವರ್ಷದ ಏಳು ಬೀಳು: ಬಿಎಸ್​ವೈ ಆಡಳಿತಾವಧಿಯಲ್ಲಿ ಎದುರಿಸಿದ್ದು ಸಾಲು - ಸಾಲು ಸವಾಲು, ನೂರೆಂಟು ವಿಘ್ನ! - ಬಿಎಸ್​ವೈ ಆಡಳಿತಾವಧಿಯಲ್ಲಿ ಎದುರಿಸಿದ್ದು ಸಾಲು-ಸಾಲು ಸವಾಲು

ಜುಲೈ 26ಕ್ಕೆ ಯಡಿಯೂರಪ್ಪ ಸರ್ಕಾರ ತನ್ನ ಎರಡು ವರ್ಷದ ಆಡಳಿತವನ್ನು ಪೂರೈಸಲಿದೆ. ಎರಡು ವರ್ಷದ ಆಡಳಿತದ ಹಾದಿ ಬಿಎಸ್​ವೈ ಸರ್ಕಾರಕ್ಕೆ ಮುಳ್ಳಿನ ಹಾದಿಯೇ ಆಗಿತ್ತು. ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರದ ಪಟ್ಟ ಏರಿದ ಯಡಿಯೂರಪ್ಪ ಸರ್ಕಾರ, ಸಾಲು - ಸಾಲು ಅಗ್ನಿ ಪರೀಕ್ಷೆಗಳನ್ನೇ ಎದುರಿಸುತ್ತಾ ಬಂದಿದೆ.

CM BS Yediyurappa
2 ವರ್ಷದ ಏಳುಬೀಳಿನ ಆಡಳಿತ

By

Published : Jul 23, 2021, 11:48 AM IST

Updated : Jul 23, 2021, 1:45 PM IST

ಬೆಂಗಳೂರು: ನಾಯಕತ್ವ ಬದಲಾವಣೆಯ ಸಾಧ್ಯತೆ ಬಲವಾಗುತ್ತಿರುವ ಬೆನ್ನಲ್ಲೇ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತಕ್ಕೆ ಇದೀಗ ಎರಡು ವರ್ಷವನ್ನು ಪೂರೈಸುತ್ತಿದೆ. ಬಂಡಾಯದ ಸುಳಿಗೆ ಸಿಲುಕಿ ಪತನವಾದ ಮೈತ್ರಿ ಸರ್ಕಾರದ ಬಳಿಕ ಅಸ್ತಿತ್ವಕ್ಕೆ ಬಂದ ಬಿಎಸ್​​​ವೈ ನೇತೃತ್ವದ ಕಮಲ ಸರ್ಕಾರಕ್ಕೆ ತನ್ನ ಎರಡು ವರ್ಷದ ಆಡಳಿತ ಮುಳ್ಳಿನ ಹಾಸಿಗೆಯೇ ಆಗಿತ್ತು.

ಜುಲೈ 26ಕ್ಕೆ ಯಡಿಯೂರಪ್ಪ ಸರ್ಕಾರ ತನ್ನ ಎರಡು ವರ್ಷದ ಆಡಳಿತ ಪೂರೈಸಲಿದೆ. ಎರಡು ವರ್ಷದ ಆಡಳಿತದ ಹಾದಿ ಬಿಎಸ್​ವೈ ಸರ್ಕಾರಕ್ಕೆ ಮುಳ್ಳಿನ ಹಾದಿಯೇ ಆಗಿತ್ತು. ಮೈತ್ರಿ ಸರ್ಕಾರ ಪತನದ ಬಳಿಕ ಅಧಿಕಾರದ ಪಟ್ಟ ಏರಿದ ಯಡಿಯೂರಪ್ಪ ಸರ್ಕಾರ, ಸಾಲು - ಸಾಲು ಅಗ್ನಿ ಪರೀಕ್ಷೆಗಳನ್ನೇ ಎದುರಿಸುತ್ತಾ ಬಂದಿದೆ. ಯಡಿಯೂರಪ್ಪ ಸರ್ಕಾರದ ಆಡಳಿತವನ್ನು ಓರೆಗೆ ಹಚ್ಚುವಂತೆ ಒಂದರ‌ ಮೇಲೊಂದರಂತೆ ಸರಣಿಯೋಪಾದಿಯಲ್ಲಿ ಸವಾಲುಗಳನ್ನು ಎದುರಿಸಿದ್ದೇ ಹೆಚ್ಚು.

ಹಿಂದೆಂದೂ ಕಾಣದ ಅತಿವೃಷ್ಟಿ, ಉಪಚುನಾವಣೆಯ ಅಗ್ನಿಪರೀಕ್ಷೆ, ಮೊದಲ ವರ್ಷ ಅಬ್ಬರಿಸಿದ ಕೊರೊನಾ, ಎರಡನೇ ವರ್ಷ ಇನ್ನಷ್ಟು ಬೊಬ್ಬಿರಿದ ಮಹಾಮಾರಿ ಬಿಜೆಪಿ ಸರ್ಕಾರದ ಮುಂದೆ ಎದುರಾದ ದೊಡ್ಡ ಸವಾಲಾಗಿತ್ತು.

ಹಿಂದೆಂದೂ ಕಾಣದ ಮಳೆ, ಅತಿವೃಷ್ಟಿ‌ಯ ಕಂಟಕ:

ಬಿಜೆಪಿ ಸರ್ಕಾರ ಅಧಿಕಾರ ಸ್ವೀಕರಿಸುತ್ತಿದ್ದ ಹಾಗೆ ರಾಜ್ಯ ಹಿಂದೆಂದೂ ಕಾಣದ ಅತಿವೃಷ್ಠಿಗೆ ಸಾಕ್ಷಿಯಾಯಿತು. ಆಗ ತಾನೇ ಅಸ್ತಿತ್ವಕ್ಕೆ ಬಂದ ಸರ್ಕಾರದಲ್ಲಿ ಯಾವುದೇ ಸಂಪುಟ ಸಚಿವರಿಲ್ಲದೇ, ಏಕಾಂಗಿಯಾಗಿ ಸಿಎಂ ಯಡಿಯೂರಪ್ಪ ಮಹಾಮಳೆಯ ಅತಿವೃಷ್ಟಿಯನ್ನು ನಿಭಾಯಿಸಬೇಕಾಯಿತು. 2019 ಆಗಸ್ಟ್​​​​ನಲ್ಲಿ ರಾಜ್ಯದಲ್ಲಿ ಮಳೆಯ ಆರ್ಭಟ ಹೆಚ್ಚಾದ ಹಿನ್ನೆಲೆ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಯಿತು. ಈ ವೇಳೆ, ಸಿಂಗಲ್ ಮ್ಯಾನ್ ಕ್ಯಾಬಿನೆಟ್ ಸಿಎಂ ಒಬ್ಬರೇ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಸ ಕೈಗೊಳ್ಳಬೇಕಾಯಿತು.

ಹಿಂದೆಂದೂ ಕಾಣದ ಪ್ರವಾಹಕ್ಕೆ ಸುಮಾರು 22 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿತ್ತು. ಸುಮಾರು 7.19 ಲಕ್ಷ ಹೆಕ್ಟೇರ್ ಬೆಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದರೆ, ಸುಮಾರು 4.5 ಲಕ್ಷ ರೈತರು ಬೆಳೆ ನಷ್ಟ ಅನುಭವಿಸಿದರು. 80 ಮಂದಿ ಸಾವನ್ನಪ್ಪಿದರೆ, ಸುಮಾರು 4 ಲಕ್ಷ ಮನೆಗಳು ನಾಶವಾಗಿದ್ದವು. ಈ‌ ಮಹಾ ಮಳೆಯಿಂದ ಉಂಟಾದ ಪ್ರವಾಹವನ್ನು ನಿಭಾಯಿಸುವ ಅಗ್ನಿಪರೀಕ್ಷೆ ಬಿಎಸ್ ವೈ ಸರ್ಕಾರಕ್ಕೆ ಆರಂಭದಲ್ಲೇ ಎದುರಾಯಿತು. ಆದಾದ ಬಳಿಕ 2020ರಲ್ಲಿ ಮತ್ತೆ ರಾಜ್ಯ ಮಹಾಮಳೆಯನ್ನು ಎದುರಿಸಬೇಕಾಯಿತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಒಂದರ ಮೇಲೊಂದರಂತೆ ಸುರಿದ ಭಾರೀ ಮಳೆ ರಾಜ್ಯವನ್ನು ಅಕ್ಷರಶಃ ನಲುಗಿಸಿ ಬಿಟ್ಟಿತ್ತು.

ಹಿಂದೆಂದೂ ಕಾಣದ ಮಳೆ, ಅತಿವೃಷ್ಟಿ‌ಯ ಕಂಟಕ

ಕೇಂದ್ರದ ನೆರೆ ಪರಿಹಾರಕ್ಕಾಗಿ ಭಗೀರಥ ಯತ್ನ:

ರಾಜ್ಯ ಭೀಕರ ಅತಿವೃಷ್ಟಿಗೆ ಸುಮಾರು 38,0000 ಕೋಟಿ ರೂ. ಬೃಹತ್ ಪ್ರಮಾಣದ ನಷ್ಟ ಅನುಭವಿಸಿತ್ತು. ಇಷ್ಟು ದೊಡ್ಡ ಪ್ರಮಾಣದ ನಷ್ಟ ಪರಿಹಾರ ಕೇಳುವುದು ಬಿಜೆಪಿ ಸರ್ಕಾರದ ಮುಂದಿದ್ದ ಅತ್ಯಂತ ಕಠಿಣ ಸವಾಲಾಗಿತ್ತು. ಇತ್ತ ಕೇಂದ್ರ ಸರ್ಕಾರ ಪರಿಹಾರ ಮೊತ್ತ ನೀಡುವಲ್ಲಿನ ವಿಳಂಬ ಧೋರಣೆ ಬಿಎಸ್​ವೈ ಸರ್ಕಾರವನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸಿತು. ರಾಜ್ಯ ಸರ್ಕಾರದ ಹಲವು ಮನವಿ ಬಳಿಕ ಕೇಂದ್ರ ಸರ್ಕಾರ ಮೊದಲಿಗೆ 1200 ಕೋಟಿ ರೂ. ಬಿಡುಗಡೆ ಮಾಡಿತು. 35,000 ಕೋಟಿ ರೂ. ಪರಿಹಾರ ಕೇಳಿದ್ದ ರಾಜ್ಯಕ್ಕೆ, ಕೇಂದ್ರ ನೀಡಿದ ಅಲ್ಪ ಪರಿಹಾರ ರಾಜ್ಯ ಸರ್ಕಾರವನ್ನು ಮತ್ತೆ ಮುಜುಗರಕ್ಕೆ ಸಿಲುಕಿಸಿತು.

ಬಳಿಕ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1869.85 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿತು. 35,000 ಕೋಟಿ ರೂ. ಪರಿಹಾರ ಹಣ ಕೇಳಿದ್ದ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದಿಂದ ನೆರೆ ಪರಿಹಾರ ಗಿಟ್ಟಿಸಿಕೊಳ್ಳಲು ಹರಸಾಹಸವೇ ಪಡಬೇಕಾಯಿತು. 2020ರಲ್ಲಿ ಸುರಿದ ಭಾರೀ ಮಳೆಗೆ ಮತ್ತೆ ರಾಜ್ಯ ವಿಪತ್ತು ಪರಿಸ್ಥಿತಿ ಎದುರಿಸಬೇಕಾಯಿತು. ಆ ಸಂದರ್ಭವೂ ಕೇಂದ್ರದಿಂದ ನಿರೀಕ್ಷಿತ ಪರಿಹಾರ ದಕ್ಕಿಸಿಕೊಳ್ಳುವಲ್ಲಿ ಸರ್ಕಾರಕ್ಕೆ ಸಾಧ್ಯವಾಗಲಿಲ್ಲ.

ಪ್ರತಿಪಕ್ಷ ಹಾಗೂ ನೆರೆ ಸಂತ್ರಸ್ತರ ಆಕ್ರೋಶವನ್ನು ಯಡಿಯೂರಪ್ಪ ಸರ್ಕಾರ ಎದುರಿಸಬೇಕಾಯಿತು. ಸೀಮಿತ ಸಂಪನ್ಮೂಲದೊಂದಿಗೆ ನೆರೆ ಪರಿಹಾರ ನೀಡುವುದೇ ಬಿಜೆಪಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಕೇಂದ್ರದ ನೆರೆ ಪರಿಹಾರಕ್ಕಾಗಿ ಭಗೀರಥ ಯತ್ನ

ಅಳಿವು - ಉಳಿವಿನ ಉಪಚುನಾವಣೆ ಅಗ್ನಿಪರೀಕ್ಷೆ:

ಯಡಿಯೂರಪ್ಪ ಸರ್ಕಾರದ ತನ್ನ ಆಡಳಿತಾವಧಿಯಲ್ಲಿ ಎದುರಿಸಿದ ಅಳಿವು ಉಳಿವಿನ ಸವಾಲು ಉಪಚುನಾವಣೆ. ಕೈ-ತೆನೆ ರೆಬೆಲ್ ಶಾಸಕರ ರಾಜೀನಾಮೆಯಿಂದ ಸರ್ಕಾರ ರಚಿಸಿದ್ದ ಯಡಿಯೂರಪ್ಪ ಸರ್ಕಾರದ ಅಳಿವು - ಉಳಿವಿನ ಭವಿಷ್ಯ ನಿರ್ಧರಿಸಿದ್ದು, ಉಪಚುನಾವಣೆ. 15 ಕ್ಷೇತ್ರಗಳಲ್ಲಿ ತ್ಯಾಗ ಮಾಡಿ, ಅನರ್ಹಗೊಂಡ ಶಾಸಕರನ್ನು ಗೆಲ್ಲಿಸಿ, ಸರ್ಕಾರವನ್ನು ಗಟ್ಟಿಗೊಳಿಸುವ ಅಗ್ನಿಪರೀಕ್ಷೆ ಬಿಜೆಪಿ ಸರ್ಕಾರದ ಮುಂದಿತ್ತು.

2019 ಡಿಸೆಂಬರ್​ನಲ್ಲಿ ನಡೆದ ಜಿದ್ದಾಜಿದ್ದಿನ ಉಪಸಮರದಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ 12 ಸ್ಥಾನವನ್ನು ಗೆದ್ದು ಬೀಗಿತು. ಯಡಿಯೂರಪ್ಪ ಸರ್ಕಾರಕ್ಕೆ ತ್ಯಾಗ ಮಾಡಿದ ಅನರ್ಹ ಶಾಸಕರನ್ನು ಗೆಲ್ಲಿಸುವ ಅನಿವಾರ್ಯತೆ ಇತ್ತು. ಅದಕ್ಕಾಗಿ ಬಿಜೆಪಿ ಸರ್ಕಾರದ ಸಂಪುಟ ಸಚಿವರುಗಳೆಲ್ಲರೂ ಉಪಚುನಾವಣೆಯ ಕಣದಲ್ಲಿ ಅಭ್ಯರ್ಥಿಗಳ ಪರವಾಗಿ ಹಗಲಿರುಳು ಪ್ರಚಾರ ಕಾರ್ಯ ನಡೆಸಿದರು. ಉಪಚುನಾವಣೆಯಲ್ಲಿ ಜಯಭೇರಿ ಭಾರಿಸುವ ಮೂಲಕ ಯಡಿಯೂರಪ್ಪ ಸರ್ಕಾರದ ಭವಿಷ್ಯ ಸುಭದ್ರವಾಯಿತು.

ಅಳಿವು - ಉಳಿವಿನ ಉಪಚುನಾವಣೆ ಅಗ್ನಿಪರೀಕ್ಷೆ

ಸಂಪುಟ ವಿಸ್ತರಣೆ ಕಸರತ್ತು:

ಬಿಎಸ್​​​ವೈ ಸರ್ಕಾರಕ್ಕೆ ಮತ್ತೊಂದು ಸಂಕಟ ಎದುರಾಗಿದ್ದು ಸಂಪುಟ ವಿಸ್ತರಣೆ.‌ ಉಪಸಮರದಲ್ಲಿ ಗೆದ್ದ ಶಾಸಕರನ್ನು ಮಂತ್ರಿಗಿರಿ ಮಾಡುವುದು ಸವಾಲಾಗಿ ಪರಿಣಮಿಸಿತು. ಬಿಜೆಪಿ ಸರ್ಕಾರ ಬರಲು ಕಾರಣಕರ್ತರಾದ ನೂತನ ಶಾಸಕರಿಗೆ ಸಚಿವ ಸ್ಥಾನ ನೀಡುವ ಅನಿವಾರ್ಯತೆ ಸರ್ಕಾರದ್ದಾಗಿತ್ತು.‌ ಆದರೆ, ಹೈಕಮಾಂಡ್ ಸಂಪುಟ ವಿಸ್ತರಣೆಗೆ ಮೀನಮೇಷ‌ ನೋಡಿರುವುದು ಬಿಎಸ್​ವೈ ಸರ್ಕಾರವನ್ನು ಮತ್ತೆ ಸಂಕಷ್ಟಕ್ಕೀಡು ಮಾಡಿತ್ತು.‌ ಎರಡು ತಿಂಗಳು ಸಂಪುಟ ವಿಸ್ತರಣೆಯಾಗದಿರುವುದು ಇತ್ತ ಗೆದ್ದ ಶಾಸಕರ ಸಹನೆಯನ್ನೂ ಕೆಡಿಸಿತ್ತು. ಬಳಿಕ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಸಿಎಂ ನಿಟ್ಟುಸಿರು ಬಿಡುವಂತಾಯಿತು.

ಕೊರೊನಾ ಮಹಾಮಾರಿಯ ಹೊಡೆತ:

ಕಳೆದ ಎರಡು ವರ್ಷದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಹೆಮ್ಮಾರಿಯಾಗಿ ಕಾಡಿದ್ದು, ಕೊರೊನಾ ಮಹಾಮಾರಿ. ಇಡೀ‌ ದೇಶವನ್ನು ಕಾಡುತ್ತಿರುವ ಕೊರೊನಾ ವೈರಾಣು ರಾಜ್ಯವನ್ನೂ ನಲುಗಿಸಿ‌ ಬಿಟ್ಟಿದೆ. ಮೊದಲ ವರ್ಷದಲ್ಲಿ ಕೊರೊನಾದ ಮೊದಲ ಅಲೆಯ ಅಬ್ಬರ, ಎರಡನೇ ವರ್ಷದಲ್ಲಿ ಕೊರೊನಾದ ಎರಡನೇ ಅಲೆಯ ಸುನಾಮಿ ಯಡಿಯೂರಪ್ಪ ಸರ್ಕಾರದ ಬುಡವನ್ನೇ ಅಲುಗಾಡಿಸಿ ಬಿಟ್ಟಿತ್ತು.

ಕೋವಿಡ್ ಅಟ್ಟಹಾಸದಿಂದ ಪಾರದ್ವಿ ಅನ್ನೋವಷ್ಟರಲ್ಲಿ ಯಡಿಯೂರಪ್ಪ ಸರ್ಕಾರದ ಎರಡನೇ ವರ್ಷದ ಆಡಳಿತದಲ್ಲಿ ಮತ್ತಷ್ಟು ವ್ಯಾಘ್ರವಾಗಿ ಕಾಡಿದ್ದು ಕೊರೊನಾ ಎರಡನೇ ಅಲೆ. ಎರಡನೇ ಅಲೆ ವ್ಯಾಪಿಸುತ್ತಿದ್ದ ವೇಗಕ್ಕೆ ಬ್ರೇಕ್ ಹಾಕಲು ಯಡಿಯೂರಪ್ಪ ಸರ್ಕಾರ ಪಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಒಂದು ಕಡೆ ಆರೋಗ್ಯ ಮೂಲ ಸೌಕರ್ಯದ ಕೊರತೆ, ಇನ್ನೊಂದೆಡೆ ಆಕ್ಸಿಜನ್, ಬೆಡ್​ಗಳ ಕೊರತೆಯಿಂದ ಕೋವಿಡ್ ಎರಡನೇ ಅಲೆ ಸರ್ಕಾರ ಮೇಲೆ ಗದಾಪ್ರಹಾರವನ್ನೇ ಮಾಡಿತು. ಕೋವಿಡ್ ಸುನಾಮಿಯಿಂದ ಗೆದ್ದು ಬರುವುದೇ ಬಿಎಸ್​ವೈ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಕೊರೊನಾ ಮಹಾಮಾರಿಯ ಹೊಡೆತ

ಆರ್ಥಿಕ ಸಂಕಷ್ಟದ ಮಹಾ ಹೊಡೆತ:

ಯಡಿಯೂರಪ್ಪ ಸರ್ಕಾರವನ್ನು ಕೊರೊನಾ ಬಳಿಕ ಅತಿಯಾಗಿ ಕಾಡಿದ್ದು ಆರ್ಥಿಕ ಸಂಕಷ್ಟ. ಕೊರೊನಾ ತಂದೊಡ್ಡಿದ ಲಾಕ್‌ಡೌನ್​ನಿಂದ ರಾಜ್ಯದ ಬೊಕ್ಕಸವೆಲ್ಲಾ ಖಾಲಿ ಖಾಲಿಯಾಗಿದ್ದವು. ಸಿಎಂ ಯಡಿಯೂರಪ್ಪ ಅಧಿಕಾರದ ಗದ್ದುಗೆ ಹಿಡಿದಾಗಿನಿಂದ ತಲೆದೋರಿದ ಆರ್ಥಿಕ ಸಂಕಷ್ಟದಿಂದ ಸುಗಮ ಆಡಳಿತವೇ ದುಸ್ತರವಾಗಿ ಪರಿಣಮಿಸಿತು. ಅಭಿವೃದ್ಧಿ ಕೆಲಸಕ್ಕೆ ಅನುದಾನ ಕೊರತೆ, ಕೇಂದ್ರದಿಂದಲೂ ಅನುದಾನ ಕಡಿತದ ಶಾಕ್ ಮಧ್ಯೆ ಬಿಜೆಪಿ ಸರ್ಕಾರ ಹಿಂಡಿ ಹಿಪ್ಪೆಯಾಯಿತು.

ರಾಜ್ಯದ ಆರ್ಥಿಕ ನಿರ್ವಹಣೆಗೆ ಹಣ ಹೊಂದಿಸುವುದೇ ಬಿಎಸ್​​ವೈ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸೀಮಿತ ಸಂಪನ್ಮೂಲದೊಂದಿಗೆ ರಾಜ್ಯದ ಅಭಿವೃದ್ಧಿ ಪಥಕ್ಕೂ ಅಡ್ಡಿಯಾಗದಂತೆ, ಕೋವಿಡ್ ನಿರ್ವಹಣೆಗಾಗಿ ಬೇಕಾದ ಅಪಾರ ಅನುದಾನ ಹೊಂದಿಸುವುದು, ಯಶಸ್ವಿಯಾಗಿ, ತ್ವರಿತ ಗತಿಯಲ್ಲಿ, ಕೊರತೆ ಇಲ್ಲದೆ ಲಸಿಕೆ ಅಭಿಯಾನ ನಡೆಸುವುದು ಯಡಿಯೂರಪ್ಪ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತು.

ಬೆನ್ನು ಬಿದ್ದ ಬೇತಾಳದಂತೆ ಕಾಡಿದ ಅತೃಪ್ತರ ಬಂಡಾಯ:

ಇತ್ತ ಹಲವು ಸವಾಲು ಎದುರಿಸುತ್ತಿರುವ ಬಿಎಸ್​ವೈ ಸರ್ಕಾರಕ್ಕೆ ಬಿಟ್ಟು ಬಿಟ್ಟು ಕಾಡ್ತಾ ಇರುವ ಮತ್ತೊಂದು ಅಡ್ಡಿ ಪಕ್ಷದಲ್ಲಿನ ಆಂತರಿಕ ಭಿನ್ನಮತ. ಬಂಡಾಯದ ಕಾವು ದಿನೇ ದಿನೆ ಹೆಚ್ಚುತ್ತಲೇ ಹೋಯಿತಲ್ಲದೇ, ಸಿಎಂಗೆ ಬಂಡಾಯಕ್ಕೆ ಇತಿಶ್ರೀ ಹಾಡಲು ಸಾಧ್ಯವಾಗಲೇ ಇಲ್ಲ. ಬಂಡಾಯದ ಬಲವಾದ ಕೈಗಳು ಹೈಕಮಾಂಡ್ ಬಾಗಿಲನ್ನೂ ತಟ್ಟಿ, ಸಿಎಂ ಕಾರ್ಯವೈಖರಿ ಬಗ್ಗೆ ಗಂಭೀರ ಆರೋಪ ಮಾಡಲಾಯಿತು.

ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್ ಬಳಿಕ ಸಚಿವ ಸಿ.ಪಿ.ಯೋಗೇಶ್ವರ್, ಎಚ್.ವಿಶ್ವನಾಥ್ ಸೇರಿದಂತೆ ಕೆಲ ಅತೃಪ್ತರು ಸಿಎಂ ವಿರುದ್ಧ ತಿರುಗಿ ಬಿದ್ದಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಭಿನ್ನಮತೀಯ ಚಟುವಟಿಕೆಯನ್ನು ತಣಿಸಲು ಸಿಎಂ ಯಡಿಯೂರಪ್ಪ ನಾನಾ ಕಸರತ್ತು ನಡೆಸುತ್ತಿದ್ದರೂ, ಅದು ಸಾಧ್ಯವಾಗಿಲ್ಲ. ಅತೃಪ್ತರು ಸರ್ಕಾರ, ಸಿಎಂ ವಿರುದ್ಧವೇ ಗಂಭೀರ ಭ್ರಷ್ಟಾಚಾರದ ಆರೋಪ, ಕುಟುಂಬ ರಾಜಕಾರಣದ ಆರೋಪ ಯಡಿಯೂರಪ್ಪಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

ಬೆನ್ನು ಬಿದ್ದ ಬೇತಾಳದಂತೆ ಕಾಡಿದ ಅತೃಪ್ತರ ಬಂಡಾಯ

ಮೀಸಲಾತಿ ಕಿಚ್ಚು, ಸಾರಿಗೆ ಮುಷ್ಕರದ ಬಿಸಿ:

ಯಡಿಯೂರಪ್ಪ ಸರ್ಕಾರ ತನ್ನ ಎರಡು ವರ್ಷದ ಆಡಳಿತದಲ್ಲಿ ಎರಡು ಪ್ರಬಲ ಸಮುದಾಯಗಳಾದ ಕುರುಬರು, ಪಂಚಮಸಾಲಿ ಲಿಂಗಾಯತ ಸಮುದಾಯದ ಮೀಸಲಾತಿ ಹೋರಾಟದ ಕಿಚ್ಚನ್ನು ಎದುರಿಸಬೇಕಾಯಿತು. ಎರಡೂ ಪ್ರಬಲ ಸಮುದಾಯಗಳು ಮೀಸಲಾತಿಗಾಗಿ ದೊಡ್ಡ ಹೋರಾಟವನ್ನೇ ನಡೆಸಿದವು. ಬೆಂಗಳೂರಿಗೆ ಬೃಹತ್ ಜಾಥಾ ಮಾಡುವ ಮೂಲಕ ಯಡಿಯೂರಪ್ಪ ಸರ್ಕಾರಕ್ಕೆ ಅಗ್ನಿಪರೀಕ್ಷೆಯನ್ನು ತಂದೊಡ್ಡಿತು.

ಮೀಸಲಾತಿಗಾಗಿ ಆಗ್ರಹಿಸಿ ಸಮುದಾಯಗಳ ಸ್ವಾಮಿಗಳೇ ಬೀದಿಗಿಳಿದು ಪಟ್ಟು ಹಿಡಿದಿದ್ದು, ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಬಳಿಕ ಮೀಸಲಾತಿ ನೀಡುವ ಆಶ್ವಾಸನೆ, ಅದಕ್ಕೆ ಪೂರಕವಾದ ಕೆಲ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಮೀಸಲಾತಿ ಕಿಚ್ಚನ್ನು ತಣ್ಣಗಾಗಿಸುವಲ್ಲಿ ಸಿಎಂ ಸಫಲರಾದರು.

ಮೀಸಲಾತಿ ಕಿಚ್ಚು
ಸಾರಿಗೆ ನೌಕರರ ಮುಷ್ಕರದ ಬಿಸಿ

ಸಾರಿಗೆ ನೌಕರರ ಮುಷ್ಕರ ಯಡಿಯೂರಪ್ಪ ಸರ್ಕಾರಕ್ಕೆ ಅತಿ ಹೆಚ್ಚು ಕಾಡಿದ ಸವಾಲು. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸುವ ಮೂಲಕ ಕರ್ನಾಟಕವನ್ನೇ ಸ್ತಬ್ಧವಾಗುವಂತೆ ಮಾಡಿತು. ಆರಂಭದಲ್ಲಿ ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ, ಸಾರಿಗೆ ನೌಕರರು ವೇತನ ಹೆಚ್ಚಿಸುವಂತೆ ಡಿಸೆಂಬರ್ 2020ರಲ್ಲಿ ನಾಲ್ಕು ದಿನಗಳ ಮುಷ್ಕರ ನಡೆಸಿದ್ದರು.‌ ಬಳಿಕ ಸರ್ಕಾರದ ಆಶ್ವಾಸನೆ ಮೇರೆಗೆ ಮುಷ್ಕರವನ್ನು ಹಿಂಪಡೆಯಲಾಯಿತು.

ಸಾರಿಗೆ ನೌಕರರ ಮುಷ್ಕರದ ಬಿಸಿ

ಆದರೆ, ವೇತನ ಪರಿಷ್ಕರಣೆ ಸೇರಿ ಬೇಡಿಕೆ ಈಡೇರಿಸದ ಕಾರಣ ಇದೇ ಏಪ್ರಿಲ್​​​​​​​​​​ನಲ್ಲಿ ಸಾರಿಗೆ ನೌಕರರು ಮತ್ತೆ ಮುಷ್ಕರದ ಹಾದಿ ಹಿಡಿದರು. ಸಿಎಂ, ಸರ್ಕಾರದ ಯಾವುದೇ ಸಂಧಾನಕ್ಕೂ ಬಗ್ಗದ ನೌಕರರು ತಮ್ಮ ಮುಷ್ಕರ ಮುಂದುವರಿಸಿದರು. 15 ದಿನಗಳ ಕಾಲ ಬಸ್ ಓಡಿಸದೇ ನೌಕರರು ಮುಷ್ಕರದ ಹಾದಿ ಹಿಡಿಯುವ ಮೂಲಕ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಬಳಿಕ ಹೈಕೋರ್ಟ್ ತರಾಟೆ ಬಳಿಕ ಸಾರಿಗೆ ನೌಕರರು ಮುಷ್ಕರದಿಂದ ಹಿಂದೆ ಸರಿದರು.

ನಾಯಕತ್ವ ಬದಲಾವಣೆಯ ಅನಿಶ್ಚಿತತೆ:
ಯಡಿಯೂರಪ್ಪರ ಎರಡು ವರ್ಷದ ಸರ್ಕಾರ ತನ್ನ ಆಡಳಿತದಲ್ಲಿ ಪ್ರಾರಂಭದಿಂದ ಈವರೆಗೆ ನಾಯಕತ್ವ ಬದಲಾವಣೆಯ ಅನಿಶ್ಚಿತತೆಯಿಂದಲೇ ಸಾಗಬೇಕಾಯಿತು. ಪದೇ ಪದೆ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆಯ ಕೂಗಿನ ಮಧ್ಯೆ ಆಡಳಿತ ನಡೆಸುವ ಪರಿಸ್ಥಿತಿ ಯಡಿಯೂರಪ್ಪ ಸರ್ಕಾರದ್ದಾಗಿತ್ತು. ಬಂಡಾಯ ಚಟುವಟಿಕೆ, ನಾಯಕತ್ವ ಬದಲಾವಣೆಗಾಗಿ ಲಾಬಿ ನಡೆಸುತ್ತಿದ್ದ ವಿರೋಧಿ ಬಣದ ತಂತ್ರಗಾರಿಕೆಗೆ ಪ್ರತಿತಂತ್ರ ಹೇರುವ ಅನಿವಾರ್ಯತೆಯೊಂದಿಗೆ ಆಡಳಿತ ನಡೆಸಬೇಕಾಯಿತು. ಎರಡು ವರ್ಷವೂ ಬಿಎಸ್​ವೈ ಸರ್ಕಾರ ನಾಯಕತ್ವ ಬದಲಾವಣೆ ಎಂಬ ಅನಿಶ್ಚಿತತೆ, ಗೊಂದಲದಲ್ಲೇ ಆಡಳಿತ ನಡೆಸುವ ಸವಾಲಿ ಎದುರಿಸಬೇಕಾಯಿತು.

Last Updated : Jul 23, 2021, 1:45 PM IST

ABOUT THE AUTHOR

...view details