ಬೆಂಗಳೂರು:ಕೆಂಗೇರಿ ಉಪನಗರದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾಗುತ್ತಿರುವ ಟ್ರಯಾಜ್ ಸೆಂಟರ್ (ಸರದಿ ನಿರ್ಧಾರ ಕೇಂದ್ರ)ವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸರದಿ ನಿರ್ಧಾರ ಕೇಂದ್ರದಲ್ಲಿ 24x7 ವೈದ್ಯರು ಲಭ್ಯವಿದ್ದು, 3 ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಈ ಕೇಂದ್ರಗಳಲ್ಲಿ ಅಗತ್ಯ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳು ಲಭ್ಯವಿರುತ್ತವೆ. ಅಲ್ಲದೆ, ಈ ಕೇಂದ್ರದಲ್ಲಿರುವ ವೈದ್ಯರು ಎಲ್ಲ ಸಮಯದಲ್ಲಿ ತಜ್ಞರೊಂದಿಗೆ ಸಂಪರ್ಕ ಹೊಂದಿರುತ್ತಾರೆ ಮತ್ತು ಅಗತ್ಯ ಸಲಹೆಗಳನ್ನು ಪಡೆಯುತ್ತಿರುತ್ತಾರೆ ಎಂದು ತಿಳಿಸಿದರು.
ಈ ಕೇಂದ್ರಗಳಲ್ಲಿ ವೈದ್ಯರು ರೋಗಿಗಳ ಭೌತಿಕ ಮೌಲ್ಯಮಾಪನ ನಡೆಸಿ ಅಗತ್ಯವಿದ್ದಲ್ಲಿ ಕೋವಿಡ್ ಆರೈಕೆ ಕೇಂದ್ರ ಆಸ್ಪತ್ರೆಗೆ ಸೇರಿಸುವಂತೆ ಸೂಕ್ತ ಶಿಫಾರಸು ಮಾಡುತ್ತಾರೆ. ಇಲ್ಲಿ ಲಭ್ಯವಿರುವ ಆಕ್ಸಿಜನ್ ಕಾನ್ಸಟ್ರೇಟರ್ಗಳನ್ನು ಉಪಯೋಗಿಸಿ ಉಸಿರಾಟದ ತೊಂದರೆಯಿರುವ ರೋಗಿಗಳಿಗೆ ತುರ್ತು ಆಮ್ಲಜನಕವನ್ನು ಒದಗಿಸಲಾಗುವುದು ಎಂದು ಸಿಎಂ ಅಭಯ ನೀಡಿದರು.
ಈ ಕೇಂದ್ರಕ್ಕೆ ಹೊಂದಿಕೊಂಡಿರುವಂತೆ ಒಂದು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಅಗತ್ಯ ಸಂದರ್ಭಗಳಲ್ಲಿ ರೋಗಿಗಳನ್ನು ಕೋವಿಡ್ ಆರೈಕೆ ಕೇಂದ್ರ ಆಸ್ಪತ್ರೆಗೆ ತಲುಪಿಸಲಾಗುವುದು. ಈ ಕೇಂದ್ರಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವ (ಮನೆ ಆರೈಕೆ) ರೋಗಿಗಳಿಗೆ ಅಗತ್ಯ ವೈದ್ಯಕೀಯ ಸಲಹೆ ಮತ್ತು ಔಷಧಿಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಮತಕ್ಷೇತ್ರದಲ್ಲಿ ಶಾಶ್ವತ ವ್ಯವಸ್ಥೆಗೆ ಶ್ರಮ
ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ನನ್ನ ಮತಕ್ಷೇತ್ರವಾದ ಯಶವಂತಪುರ ವ್ಯಾಪ್ತಿಯಲ್ಲಿ ಬಿ.ಜಿ.ಎಸ್, ಗ್ಲೋಬಲ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ಹಾಸ್ಪಿಟಲ್ ಸಂಸ್ಥೆಯಿಂದ ನಿರ್ಮಾಣಗೊಂಡ ನೂತನ ಕೋವಿಡ್ ಕೇರ್ ಸೆಂಟರ್ ಅನ್ನು ಇಂದು ತೆರೆಯಲಾಗಿದೆ. ಸಾರ್ವಜನಿಕ ಸೇವೆಗೆ ಶ್ರೀ ಆದಿಚುಂಚನಗಿರಿ ಮಠ ಹಾಗೂ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಯಾವಾಗಲೂ ಮುಂದು. ಈ ನಿಟ್ಟಿನಲ್ಲಿ ಮಹಾಸ್ವಾಮೀಜಿಗಳ ಜೊತೆ ಹಲವಾರು ಬಾರಿ ಭೇಟಿ ಮಾಡಿ ಮನವಿ ಮಾಡಿಕೊಂಡಾಗಲೂ ಸ್ಪಂದಿಸಿದ್ದಲ್ಲದೆ, ಜನತೆಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಅವರಿಗೆ ನಾನು ಆಭಾರಿ. ಅಲ್ಲದೆ, ಯಶವಂತಪುರ ಕ್ಷೇತ್ರದಲ್ಲಿ ಸರ್ಕಾರ ಹಾಗೂ ಸರ್ಕಾರೇತರವಾಗಿ ಸುಸಜ್ಜಿತ ಹಾಗೂ ಶಾಶ್ವತ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸುವ ಚಿಂತನೆ ಇದ್ದು, ಈ ನಿಟ್ಟಿನಲ್ಲಿಯೂ ಶ್ರಮವಹಿಸುತ್ತಿದ್ದೇನೆ ಎಂದು ಯಶವಂತಪುರ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಲಾಕ್ಡೌನ್ ತೀರ್ಮಾನ ಮುಖ್ಯಮಂತ್ರಿಗಳದ್ದು
ಲಾಕ್ಡೌನ್ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗಾಗಲೇ ಸರ್ಕಾರದ ವತಿಯಿಂದ ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ತಜ್ಞರ ಸಮಿತಿ ಹೇಳಿದ್ದನ್ನು ನಾವು ಪಾಲಿಸುತ್ತಾ ಬಂದಿದ್ದೇವೆ. ಲಾಕ್ಡೌನ್ ಅನ್ನು 10 ದಿನ ವಿಸ್ತರಣೆ ಮಾಡ್ಬೇಕು ಅನ್ನೋ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಮುಖ್ಯಮಂತ್ರಿಗಳು ತಿರ್ಮಾನವನ್ನು ತೆಗೆದುಕೊಳ್ತಾರೆ. ಎಲ್ಲಾ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಜೊತೆ ಇಂದು ವಿಡಿಯೋ ಸಂವಾದ ನಡೆಸಲಿರುವ ಮುಖ್ಯಮಂತ್ರಿಗಳು ನಂತರ ತೀರ್ಮಾನವನ್ನು ಪ್ರಕಟಿಸುತ್ತಾರೆ. ಕಳೆದ ಬಾರಿ ಪ್ಯಾಕೇಜ್ ಘೋಷಣೆ ಮಾಡಿದ್ದರು. ಈ ಬಾರಿ ಏನು ಮಾಡಬೇಕೆಂಬ ಬಗ್ಗೆ ಚರ್ಚಿಸಿ, ಮಾಹಿತಿ ಸಂಗ್ರಹಿಸುತ್ತಾರೆ ಎಂದು ಸಚಿವರು ವಿವರಿಸಿದರು.