ಬೆಂಗಳೂರು: ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಮುಂಗಡ ಬಜೆಟ್ ಮಂಡನೆಯಾಗಲಿದೆ. ಫೆಬ್ರವರಿ ಎರಡನೇ ವಾರದಿಂದ ಇಡೀ ವಾರ ಎಲ್ಲ ಇಲಾಖೆಗಳ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರಣಿ ಸಭೆ ನಡೆಸಲಿದ್ದಾರೆ.
ಫೆಬ್ರವರಿ 7ರಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಶಕ್ತಿಭವನದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಬಜೆಟ್ ಪೂರ್ವಭಾವಿ ಸಭೆ ಆರಂಭಿಸಲಿದ್ದಾರೆ. ವಿವಿಧ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಇಲಾಖೆಗಳ ಜೊತೆ ಸಭೆ ನಿಗದಿಯಾಗಿದೆ.
ಉಳಿದಂತೆ ಫೆಬ್ರವರಿ 21ರಂದು ರೈತ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಭೆ ನಡೆಸಲಿದ್ದಾರೆ. ಫೆಬ್ರವರಿ 22 ಹಾಗೂ 25ರಂದು ತೆರಿಗೆ ಸಂಗ್ರಹ ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ. ಆ ನಂತರ ಬಜೆಟ್ ಅಂತಿಮ ರೂಪುರೇಷೆ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಿದ್ದಾರೆ.
ಆರ್ಥಿಕ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆಗಳ ಹಿನ್ನಲೆಯಲ್ಲಿ ಸಂಬಂಧಪಟ್ಟ ಸಚಿವರು ಸಿಎಂ ಸಭೆ ಕರೆದ ವೇಳೆ ಹಾಜರು ಇರುವಂತೆ ಸೂಚನೆ ನೀಡಲಾಗಿದೆ. ಸಿಎಂ ಕಚೇರಿಯಿಂದ ಎಲ್ಲ ಸಚಿವರಿಗೆ ಸೂಚನೆ ಹೊರಡಿಸಲಾಗಿದೆ. ಫೆಬ್ರವರಿ 7 ರಿಂದ 14 ರವರಗೆ ನಿರಂತರ ಬಜೆಟ್ ಪೂರ್ವಭಾವಿ ಸಭೆ ಇದ್ದು, ಸಭೆ ವೇಳೆ ಕಡ್ಡಾಯವಾಗಿ ಸಚಿವರು ಹಾಜರಿರಲು ಸೂಚನೆ ನೀಡಲಾಗಿದೆ.