ಬೆಂಗಳೂರು: ಉಕ್ರೇನ್ನಲ್ಲಿ ಯುದ್ಧ ಪ್ರಾರಂಭವಾದ ಬಳಿಕ ವಿದ್ಯಾರ್ಥಿಗಳನ್ನು ಕರೆ ತರುವ ಕೆಲಸ ಮಾಡ್ತಿದ್ದೇವೆ. ಅಲ್ಲಿನ ರಾಯಾಭಾರಿ ಕಚೇರಿ ಜೊತೆ ನಿರಂತರ ಸಂಪರ್ಕ ಸಾಧಿಸಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿ ಪ್ರತಿಕ್ರಿಯೆ ನೀಡಿದ ಅವರು, ಉಕ್ರೇನ್ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿರುವ 100 ಭಾರತೀಯರ ಪೈಕಿ ರಾಜ್ಯದ 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದ್ದು, ಸುರಕ್ಷಿತವಾಗಿ ಕರತೆರುವ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಈ ವಿಚಾರ ಗಮನಕ್ಕೆ ಬರುತ್ತಲೇ ಕೇಂದ್ರ ಸರ್ಕಾರ, ವಿದೇಶಾಂಗ ಕಾರ್ಯದರ್ಶಿ ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಜೊತೆಗೆ ಸಂಪರ್ಕ ಸಾಧಿಸಿದ್ದು, ವಿದೇಶಾಂಗ ಸಚಿವರೊಂದಿಗೆ ಮಾತನಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
(ಇದನ್ನೂ ಓದಿ: ರಷ್ಯಾ ಆಕ್ರಮಣ ಶುರು: ಉಕ್ರೇನ್ ರಾಜಧಾನಿ, ನಗರಗಳಲ್ಲಿ ಭಾರಿ ಪ್ರಮಾಣದ ಸ್ಫೋಟ- ವಿಡಿಯೋ)
ಕೇಂದ್ರ ಸರ್ಕಾರ ನೀಡಿದ ಮಾಹಿತಿಯಂತೆ ಉಕ್ರೇನ್ನಲ್ಲಿರುವ ಭಾರತೀಯರು ತಂಡಗಳಾಗಿ ದೇಶಕ್ಕೆ ಮರಳುತ್ತಿದ್ದಾರೆ. ಕೊನೆಯ ತಂಡವು ಬಸ್ನಲ್ಲಿ ಕುಳಿತು ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಅಷ್ಟರೊಳಗೆ ವಿಮಾನಗಳ ಸಂಚಾರ ಸ್ಥಗಿತವಾಗಿ ಮರು ಪ್ರಯಾಣ ಸಾಧ್ಯವಾಗಿಲ್ಲ. ರಾಜ್ಯದ 10 ವಿದ್ಯಾರ್ಥಿಗಳು ಸೇರಿದಂತೆ 100 ಕ್ಕೂ ಭಾರತೀಯರ ಜೊತೆಗೆ ಭಾರತದಲ್ಲಿರುವ ಉಕ್ರೇನ್ ರಾಯಭಾರಿ ಕಚೇರಿ ಹಾಗೂ ಉಕ್ರೇನ್ನಲ್ಲಿರುವ ಭಾರತೀಯ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದರ ಜೊತೆಗೆ ಸಿಲುಕಿಕೊಂಡವರು ಕೂಡ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸುರಕ್ಷಿತ ಸ್ಥಳದ ಕುರಿತು ಅಲ್ಲಿನ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ನಿರಂತರ ಸಂಪರ್ಕದಲ್ಲಿದೆ. ರಾಜ್ಯದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಪ್ರಯತ್ನ ಮುಂದುವರಿದಿದೆ ಎಂದು ಸಿಎಂ ಹೇಳಿದರು.
(ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ಒಂದು ಗಂಟೆಯೊಳಗೆ ಹೂಡಿಕೆದಾರರಿಗೆ ₹8 ಲಕ್ಷ ಕೋಟಿ ನಷ್ಟ)