ಬೆಂಗಳೂರು: ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿಗೆ ತಮಿಳುನಾಡು ಮುಖ್ಯಮಂತ್ರಿ ಪತ್ರ ಬರೆದಿರುವುದು ಕಾನೂನುಬಾಹಿರ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ನಮ್ಮ ನೀರಿನ ಹಕ್ಕಿನ ಮೇಲೆ ಅವರು ದಬ್ಬಾಳಿಕೆ ಮಾಡುವ ಹುನ್ನಾರ ನಡೆಸಿದ್ದು, ಅವರ ಬೇಡಿಕೆಯನ್ನು ಕೇಂದ್ರ ಪರಿಗಣಿಸಬಾರದು. ನಮಗೆ ನ್ಯಾಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಬಗ್ಗೆ ಕಾವೇರಿ ನದಿ ನಿರ್ವಹಣಾ ಮಂಡಳಿಯಲ್ಲಿ ಡಿಪಿಆರ್ ಅಪ್ರೂಪ್ ಮಾಡಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಅದೇ ರೀತಿ, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಲ್ಲಿ ಹಲವಾರು ಸಭೆ ಆಗಿವೆ, ಸದ್ಯದಲ್ಲೇ ಅಂತಿಮ ಸಭೆ ಬರುತ್ತದೆ.
ಈಗ ತಮಿಳುನಾಡು ಕ್ಯಾತೆ ತೆಗೆದಿದೆ. ಪ್ರಧಾನಿಗೆ ಪತ್ರ ಬರೆದಿದ್ದಾರೆ ಎನ್ನುವ ಸುದ್ದಿ ಬಂದಿದೆ. ಆ ಪತ್ರವನ್ನು ತರಿಸಿಕೊಳ್ಳುತ್ತೇನೆ. ಅವರ ಬೇಡಿಕೆ ಕಾನೂನುಬಾಹಿರ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಮತ್ತು ನಮ್ಮ ನೀರಿನ ಹಕ್ಕಿನ ಮೇಲೆ ಅವರು ದಬ್ಬಾಳಿಕೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.