ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ರಾಜ್ಯ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಸಚಿವರು, ಜಿಲ್ಲಾಧ್ಯಕ್ಷರು ಸೇರಿದಂತೆ ಎಲ್ಲರೊಂದಿಗೆ ಮಾತನಾಡಿ ಈ ನಿರ್ಣಯವನ್ನು ಆತ್ಮಸಾಕ್ಷಿ ಮೂಲಕ ತೆಗೆದುಕೊಳ್ಳಲಾಗಿದೆ. ಆದರೂ ಸರ್ಕಾರದ ಕಲ್ಯಾಣ ಕಾರ್ಯಕ್ರಮವನ್ನು ಹೇಳುವ ಅಗತ್ಯ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತಕ್ಕೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಮ್ಮದೊಂದು ಟೀಂ ವರ್ಕ್ ಆಗಿದೆ. ಸಚಿವ ಸಂಪುಟದಲ್ಲಿ ಸೇವಾ ಮನೋಭಾವನೆ ಇರುವವರು ಇದ್ದಾರೆ, ಅನುಭವಿಗಳಿದ್ದಾರೆ, ಉತ್ಸಾಹಿಗಳಿದ್ದಾರೆ. ಎಲ್ಲರಿಗೂ ಬದ್ಧತೆ ಇದೆ. ಕೋವಿಡ್ ನಿಯಂತ್ರಣ ಹಂತದಲ್ಲಿದ್ದಾಗ ಸಂದರ್ಭ ನಾನು ಅಧಿಕಾರ ಸ್ವೀಕರಿಸಿದೆ. ಆಡಳಿತ ಯಾರ ಪರವಾಗಿದೆ ಎಂಬುದು ಬಹಳ ಮುಖ್ಯ. ಜನ ಪರವಾದ ಆಡಳಿತ, ರಾಜ್ಯದ ಜನರು ಪಾಲ್ಗೊಳ್ಳುವಂತ ಆಡಳಿತ. ರೈತರ ಪರ, ರೈತ ವಿದ್ಯಾನಿಧಿ ಯೋಜನೆ ನೀಡಿದ್ದೇವೆ ಎಂದು ಹೇಳಿದರು.