ಬೆಂಗಳೂರು:ಯಾರ ಒತ್ತಡಕ್ಕೋ ಮಣಿದು ನಾವು ವೀಕೆಂಡ್ ಕರ್ಫ್ಯೂ ವಾಪಸ್ ಪಡೆದಿಲ್ಲ. ಜನರ ಜೀವ ಉಳಿಯಬೇಕು, ಜೀವನವೂ ನಡೆಯಬೇಕು ಎನ್ನುವುದನ್ನು ಗಮನದಲ್ಲಿರಿಸಿಕೊಂಡು ತಜ್ಞರ ಅಭಿಪ್ರಾಯ ಪಡೆದು, ವೈಜ್ಞಾನಿಕ ಆಯಾಮದಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್.ಟಿ ನಗರದ ಖಾಸಗಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಡೆ ಮೂರನೇ ಅಲೆಯಲ್ಲಿ ಸಂಖ್ಯೆ ಹೆಚ್ಚಿದ್ದರೂ ತೀವ್ರತೆ ಕಡಿಮೆ ಇದೆ. ಬೇಕಾದ ಔಷಧ ಲಭ್ಯ ಇದೆ. ಗುಣ ಮುಖದ ಪ್ರಮಾಣವು ಬಹಳ ಹೆಚ್ಚಾಗಿದೆ. ಹೀಗಾಗಿ ನಮ್ಮ ತಜ್ಞರು, ಆರೋಗ್ಯ ಇಲಾಖೆಯವರು ಯಾವ ರೀತಿ ಕೊರೊನಾ ನಿರ್ವಹಣೆ ಮಾಡಬಹುದು ಎನ್ನುವ ಧೈರ್ಯ ಕೊಟ್ಟಿದ್ದರಿಂದ ಹಾಗೂ ಸಾಮಾನ್ಯ ಜನರಿಗೆ, ಕೂಲಿಕಾರರಿಗೆ, ಬಡವರಿಗೆ, ಕೆಲಸ ಮಾಡುವವರಿಗೆ ಎಲ್ಲರಿಗೂ ವೀಕೆಂಡ್ ಕರ್ಫ್ಯೂನಿಂದ ತೊಂದರೆಯಾಗುತ್ತಿತ್ತು.
ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ನಿರ್ವಹಣೆ ಮತ್ತಷ್ಟು ಸದೃಢಗೊಳಿಸಿ ಜೀವ ಉಳಿಯಬೇಕು, ಜೀವನವೂ ನಡೆಯಬೇಕು ಎನ್ನುವ ಕಾರಣಕ್ಕೆ ನಾವು ವೀಕೆಂಡ್ ಕರ್ಫ್ಯೂ ವಾಪಸ್ ಪಡೆಯುವ ತೀರ್ಮಾನ ಕೈಗೊಂಡಿದ್ದೇವೆ. ಇದರಲ್ಲಿ ಯಾರ ಲಾಭಿಗೆ, ಒತ್ತಡಕ್ಕೆ ಮಣಿದಿರುವ ಪ್ರಶ್ನೆ ಇಲ್ಲ ಎಂದರು.
ಹಾಲು, ನೀರು ದರ ಏರಿಕೆಗೆ ಅವಸರದ ನಿರ್ಧಾರ ಮಾಡಲ್ಲ:ಹಾಲು, ನೀರು, ವಿದ್ಯುತ್ ದರ ಏರಿಕೆ ಕುರಿತು ಇನ್ನೂ ಯಾವುದೇ ತೀರ್ಮಾನಗಳು ಆಗಿಲ್ಲ. ಹಾಲು, ನೀರು, ವಿದ್ಯುತ್ ದರ ಏರಿಕೆ ಕುರಿತು ಪ್ರಸ್ತಾಪಗಳು ಎಲ್ಲ ಆಡಳಿತದಲ್ಲಿ ಇದ್ದೇ ಇರುತ್ತವೆ. ನಾವು ಎಲ್ಲ ಆಯಾಮಗಳಲ್ಲಿ ಅವಲೋಕಿಸಿ ನಂತರವೇ ನಿರ್ಧರಿಸುತ್ತೇವೆ. ಈ ವಿಚಾರದಲ್ಲಿ ಯಾವುದೇ ಅವಸರದ ತೀರ್ಮಾನ ಕೈಗೊಳ್ಳುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಜಲ ವ್ಯಾಜ್ಯಗಳ ಕುರಿತು ಸಭೆ: ಕೃಷ್ಣಾ ಮತ್ತು ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಸಮಸ್ಯೆಗಳು ಮತ್ತು ನ್ಯಾಯಾಲಯದಲ್ಲಿ ವ್ಯಾಜ್ಯಗಳ ಕುರಿತು ವಿಡಿಯೋ ಸಂವಾದದ ಮೂಲಕ ಇಂದು ಸಭೆ ನಡೆಸಲಾಗುತ್ತದೆ. ದೆಹಲಿಯಿಂದ ನಮ್ಮ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ನಮ್ಮ ಅಡ್ವೋಕೆಟ್ ಜನರಲ್, ನೀರಾವರಿ ಇಲಾಖೆ ತಾಂತ್ರಿಕ ತಜ್ಞರು ಕೂಡ ಭಾಗವಹಿಸಲಿದ್ದಾರೆ. ನೀರಾವರಿ ವಿಚಾರದಲ್ಲಿ ನಮ್ಮದು ಮಧ್ಯ ಸ್ತರದ ರಾಜ್ಯವಾಗಿದೆ.
ಹೀಗಾಗಿ ನಮ್ಮ ಮೇಲಿರುವ ರಾಜ್ಯಗಳು, ನಮ್ಮ ಕೆಳಗಿರುವ ರಾಜ್ಯಗಳು ಆಗಾಗ ತಕರಾರುಗಳನ್ನು ತೆಗೆಯುತ್ತಲೇ ಇರುತ್ತವೆ. ಈಗಾಗಲೇ ಎರಡು ನ್ಯಾಯಾಧೀಕರಣದ ಆದೇಶ ಬಂದಿದೆ. ಕೃಷ್ಣಾ ನದಿದ್ದು ಮೊದಲನೇ ಆದೇಶ ಬಚಾವತ್ ಆದೇಶ, ಎರಡನೇ ಆದೇಶ ಕೂಡ ಬಂದಿದೆ. ನೋಟಿಫಿಕೇಶನ್ ಆಗಬೇಕು ಆದರೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಬಾಕಿ ಉಳಿದಿದೆ ಎಂದರು.