ಬೆಂಗಳೂರು:ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ನಗರಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿ ಅನೌಪಚಾರಿಕವಾಗಿ ಮಾತುಕತೆ ನಡೆಸಿದರು.
ಅಮಿತ್ ಶಾ ಭೇಟಿಯಾದ ಸಿಎಂ ಬೊಮ್ಮಾಯಿ..! - ಅಮಿತ್ ಶಾ ಸಿಎಂ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಿಎಂ ಬೊಮ್ಮಾಯಿ ಭೇಟಿಯಾಗಿ, ಮಾತುಕತೆ ನಡೆಸಿದರು.
ಅಮಿತ್ ಶಾ ವಾಸ್ತವ್ಯ ಹೂಡಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಾಂಪ್ರದಾಯಿಕ ಮೈಸೂರು ಪೇಟ ತೊಡಿಸಿ ಹೂ ಗುಚ್ಛ ನೀಡಿ ಗೌರವಿಸಿದರು. ಕಳೆದ ರಾತ್ರಿ ಅಮಿತ್ ಶಾ ಆಗಮನದ ವೇಳೆ ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಸಿಎಂ ತೆರಳಿರಲಿಲ್ಲ. ಜಿಲ್ಲಾ ಪ್ರವಾಸದಿಂದ ವಾಪಸ್ ಆಗಿರುವುದು ವಿಳಂಬವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಅಮಿತ್ ಶಾ ಭೇಟಿ ಮಾಡಿದ ಸಿಎಂ ಕೆಲಕಾಲ ಮಾತುಕತೆ ನಡೆಸಿದರು.
ಬೆಳಗ್ಗೆ ಅಮಿತ್ ಶಾ 'ಸಂಕಲ್ಪ ಸೆ ಸಿದ್ಧಿ' 3ನೇ ಆವೃತ್ತಿಯ ಸಮ್ಮೇಳದನಲ್ಲಿ ಭಾಗವಹಿಸಬೇಕಿದ್ದ ಹಿನ್ನೆಲೆಯಲ್ಲಿ ಸಿಎಂ ಜೊತೆ ಹೆಚ್ಚಿನ ಮಾತುಕತೆ ನಡೆಸಲಿಲ್ಲ ಎನ್ನಲಾಗಿದೆ. ಕಾರ್ಯಕ್ರಮದ ನಂತರ ಸಭೆ ನಡೆಸಿ ಸಂಪುಟ ವಿಸ್ತರಣೆ, ಪ್ರವೀಣ್ ಹತ್ಯೆ ಸೇರಿದಂತೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.