ಕರ್ನಾಟಕ

karnataka

ETV Bharat / city

75 ಎಲೆಕ್ಟ್ರಿಕ್ ಬಸ್​​ಗಳ ಸಂಚಾರಕ್ಕೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ - ಸ್ವಾತಂತ್ರ್ಯ ಅಮೃತ ಮಹೋತ್ಸವ

ಬೆಂಗಳೂರಿನಲ್ಲಿ 75 ಎಲೆಕ್ಟ್ರಿಕ್ ಬಸ್​​ಗಳ ಸಂಚಾರಕ್ಕೆ ಸಿಎಂ ಬೊಮ್ಮಾಯಿ ಇಂದು ಹಸಿರು ನಿಶಾನೆ ತೋರಿದರು.

BMTC electric bus services launches
ಎಲೆಕ್ಟ್ರಿಕ್ ಬಸ್​​ಗಳ ಸಂಚಾರಕ್ಕೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ

By

Published : Aug 14, 2022, 2:28 PM IST

ಬೆಂಗಳೂರು:ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ವಿಧಾನಸೌಧದ ಮೆಟ್ಟಿಲುಗಳ ಮುಂಭಾಗ ಬಿಎಂಟಿಸಿಯ 75 ಎಲೆಕ್ಟ್ರಿಕ್ ಬಸ್​​ಗಳನ್ನು ಲೋಕಾರ್ಪಣೆ ಮಾಡಿದರು. ಈ ಮೂಲಕ ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್​​ಗಳನ್ನು ಬಿಎಂಟಿಸಿ ರಸ್ತೆಗಿಳಿಸಿದೆ.

12 ಮೀ. ಉದ್ದದ ನಾನ್ ಎಸಿ ಈ ಬಸ್​​ಗಳು 40+1 ಆಸನಗಳನ್ನು ಹೊಂದಿವೆ. ಈ ಬಸ್​​ಗಳು ಮೆಜೆಸ್ಟಿಕ್ - ವಿದ್ಯಾರಣ್ಯಪುರ, ಶಿವಾಜಿನಗರ-ಯಲಹಂಕ, ಯಲಹಂಕ- ಕೆಂಗೇರಿ, ಮೆಜೆಸ್ಟಿಕ್-ಯಲಹಂಕ ಉಪನಗರ, ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗಗಳಲ್ಲಿ ಸಂಚರಿಸಲಿವೆ.

ಎಲೆಕ್ಟ್ರಿಕ್ ಬಸ್​​ಗಳ ಸಂಚಾರಕ್ಕೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ

ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಸಂಕಲ್ಪ: ಇದೇ ವೇಳೆ ಮಾತನಾಡಿದ ಸಿಎಂ, ಬಿಎಂಟಿಸಿ ಮತ್ತೆ ಆರ್ಥಿಕ ಸಂಕಷ್ಟದಲ್ಲಿದೆ. ಕೋವಿಡ್​​ನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಬಿಎಂಟಿಸಿಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವುದು ಸರ್ಕಾರದ ಸಂಕಲ್ಪ ಎಂದರು.

ಬೆಂಗಳೂರಿನಲ್ಲಿಂದು 1.25 ಕೋಟಿ ಜನಸಂಖ್ಯೆ ಇದೆ. ಇದಕ್ಕೆ ಸಮಾನವಾಗಿ ವಾಹನಗಳ ಸಂಖ್ಯೆಯೂ ಇದೆ. ಮುಂದಿನ ಮೂರು ವರ್ಷದಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಲಿದೆ. ನಗರದ ವಿಸ್ತೀರ್ಣ, ರಸ್ತೆಗಳು ಅಷ್ಟೇ ಇವೆ. ಇದಕ್ಕೆ ಪೂರಕವಾಗಿ ಮೂಲಭೂತ ಸೌಕರ್ಯಗಳು ಬೇಕು. ಹೀಗಾಗಿ ಬೆಂಗಳೂರು ಸಾರಿಗೆಯಲ್ಲಿ ಹೊಸ ಚಿಂತನೆ ಅಗತ್ಯ ಇದೆ.

2022-23ರಲ್ಲಿ ಸಾರಿಗೆ ಇಲಾಖೆಗೆ ಸರ್ಕಾರ 800 ಕೋಟಿ ರೂ. ನೆರವು ನೀಡಿದೆ. ಇತ್ತೀಚೆಗೆ 400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಕಳೆದ ಎರಡು ಮೂರು ವರ್ಷಗಳಿಂದ ಸಾರಿಗೆ ಇಲಾಖೆಗೆ 3000 ಸಾವಿರ ಕೋಟಿ ರೂ ನೆರವು ಕೊಟ್ಟಿದೆ. ಹಿಂದಿನ ಸರ್ಕಾರಗಳು ಹೇಗೆ ಬೇಕೋ ಹಾಗೆ ನಡೆಸಿಕೊಂಡು ಹೋದರು. ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಇಂದು ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗಿದೆ ಎಂದು ದೂರಿದರು.

ನಮ್ಮ ಗುರಿ ಸಮಸ್ಯೆ ಮುಂದೆ ಹಾಕ್ಕೊಂಡು ಹೋಗೋದಲ್ಲ. ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು. ಸಾರಿಗೆ ಇಲಾಖೆಯಲ್ಲಿ ನಾವು ಕೆಲಸ ಮಾಡಿ ತೋರಿಸುತ್ತೇವೆ. ಒಟ್ಟು 300 ಎಲೆಕ್ಟ್ರಿಕ್ ಬಸ್​​ಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ ಇಂದು 75 ಬಸ್​​ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಇನ್ನೆರಡು ಹಂತಗಳಲ್ಲಿ ಉಳಿದ ಬಸ್​​ಗಳು ಬರಲಿವೆ. ಬಿಎಂಟಿಸಿಗೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ 922 ಎಲೆಕ್ಟ್ರಿಕ್‌ ಬಸ್​​ಗಳನ್ನು ಲೀಸ್​​ಗೆ ಕೊಡಲಿದೆ. ನಮ್ಮ ಕಡೆಯಿಂದ 300 ಎಲೆಕ್ಟ್ರಿಕ್ ಬಸ್ ರಸ್ತೆಗೆ ಇಳಿಯಲಿವೆ ಎಂದು ಹೇಳಿದರು.

ಬಸ್ ವಿಶೇಷತೆಗಳೇನು?:ಈ ಬಸ್​​ಗಳು ಹವಾ ನಿಯಂತ್ರಣ ರಹಿತ 12 ಮೀ. ಉದ್ದ ಮತ್ತು 40+1 ಆಸನ ಹೊಂದಿವೆ. ಪ್ರಯಾಣಿಕರ ಸುರಕ್ಷತೆಗಾಗಿ Vehicle Tracking Unit, ಸಿಸಿ ಟಿವಿ, ತುರ್ತು ಪ್ಯಾನಿಕ್ ಬಟನ್ ಮತ್ತು ಎಲ್​​ಇಡಿ ಮಾರ್ಗ ಫಲಕಗಳನ್ನು ಅಳವಡಿಸಲಾಗಿದೆ.

ವಿಕಲಚೇತನರ ಅನುಕೂಲಕ್ಕಾಗಿ ಗಾಲಿ ಕುರ್ಚಿಯನ್ನು ಯಾಂತ್ರಿಕವಾಗಿ ಕಾರ್ಯ ನಿರ್ವಹಿಸಬಲ್ಲ ವಿಧಾನವನ್ನು ಹೊಂದಿರುತ್ತದೆ. M/s Switch Mobility Automotive Limited ರವರು ಎಲೆಕ್ಟ್ರಿಕ್ ಬಸ್​​ಗಳನ್ನು 12 ವರ್ಷಗಳ ಅವಧಿಗೆ Gross Cost Contract ಆಧಾರದಲ್ಲಿ ಕಾರ್ಯಾಚರಿಸಲಿದ್ದಾರೆ. ಪ್ರತಿ ದಿನ ಪ್ರತಿ ಬಸ್ಸಿಗೆ 225 ಕಿ.ಮೀ ಕಾರ್ಯಾಚರಣೆಗೆ ಪ್ರತಿ ಕಿ.ಮೀಗೆ ವಿದ್ಯುಚ್ಛಕ್ತಿ ಒಳಗೊಂಡಂತೆ ರೂ.48.90 ರೂ. ಪಾವತಿಸಲಾಗುವುದು.

ಎಲೆಕ್ಟ್ರಿಕ್‌ ಬಸ್​​ಗಳು ಒಂದು ಬಾರಿ ಚಾರ್ಜ್ ಆದ ನಂತರ (Single Charging) ನಲ್ಲಿ 150 ಕಿ.ಮೀ. ಕ್ರಮಿಸುತ್ತವೆ. ಉಳಿದ 75 ಕಿ.ಮೀಗಳನ್ನು Opportunity Charging ಮೂಲಕ ಕಾರ್ಯಾಚರಿಸಲಾಗುತ್ತದೆ. ಅಂದರೆ ಬಸ್​ಗಳು ರಿಚಾರ್ಜ್ ಮಾಡಲು ಡಿಪೋಗಳಿಗೆ ಹೋಗಬೇಕಿಲ್ಲ. ಬದಲಿಗೆ ಮಾರ್ಗದಲ್ಲಿರುವ ನಿಗದಿತ ಬಸ್ ನಿಲ್ದಾಣಗಳಲ್ಲಿ ಸಮಯ ಸಿಕ್ಕಾಗ ತ್ವರಿತವಾಗಿ ಚಾರ್ಚ್ ಮಾಡುವ ವ್ಯವಸ್ಥೆ. Opportunity Charging ಗೆ ಕೆಂಪೇಗೌಡ ಬಸ್ ನಿಲ್ದಾಣ (ಘಟಕ-07), ಯಶವಂತಪುರ (ಘಟಕ-08), ಕೆಂಗೇರಿ (ಘಟಕ-12) ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣಗಳನ್ನು ಗುರುತಿಸಲಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ಎಲೆಕ್ಟ್ರಿಕ್ ಬಸ್‌ಗಳ ಸಂಚಾರ?:

  • ಮೆಜೆಸ್ಟಿಕ್- ವಿದ್ಯಾರಣ್ಯಪುರ: 10 ಬಸ್​ಗಳು
  • ಶಿವಾಜಿನಗರ- ಯಲಹಂಕ: 20
  • ಯಲಹಂಕ- ಕೆಂಗೇರಿ: 10
  • ಮೆಜೆಸ್ಟಿಕ್- ಯಲಹಂಕ ಉಪನಗರ: 15
  • ಹೆಬ್ಬಾಳ- ಸೆಂಟ್ರಲ್ ಸಿಲ್ಕ್ ಬೋರ್ಡ್-20

ಇದನ್ನೂ ಓದಿ:ರಾಜ್ಯ ಸರ್ಕಾರದ ಜಾಹೀರಾತಿನಲ್ಲಿ ನೆಹರು ಫೋಟೋ ಮಿಸ್ಸಿಂಗ್‌, ಕಾಂಗ್ರೆಸ್‌ ವಾಗ್ದಾಳಿ

ABOUT THE AUTHOR

...view details