ಬೆಂಗಳೂರು: ಮಾನವೀಯ ಗುಣಗಳೇ ಭಾರತದ ದೇಶದ ಅಂತರ್ಗತ ಶಕ್ತಿಯಾಗಿದ್ದು, ಪ್ರತಿ ಭಾರತೀಯನನ್ನು ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಸಮೀಪದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿ ಆವರಣದ ಬಳಿ ಅಖಿಲ ಭಾರತ ಪರಿಶಿಷ್ಟ ಜಾತಿ/ವರ್ಗದ ರೈಲ್ವೆ ನೌಕರ ಸಂಘದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಡಾ.ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ. ಕೇವಲ ಆಡಳಿತಗಾರರಿಗೆ ಮಾತ್ರವಲ್ಲ, ದೇಶದ ಪ್ರತಿ ನಾಗರಿಕನಿಗೂ ಅಧಿಕಾರವನ್ನು ಕೊಟ್ಟಿದೆ. ನ್ಯಾಯ, ನೀತಿ, ಬಡವರಿಗೆ ರಕ್ಷಣೆ, ತುಳಿತಕ್ಕೊಳಗಾದವರಿಗೆ ಸ್ವಾಭಿಮಾನ ನೀಡಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತಳಹಂತದ, ಅವಕಾಶವಂಚಿತ, ಶಿಕ್ಷಣವಂಚಿತ ಸಮಾಜದವರು ಸ್ವಾವಲಂಬನೆಯ ಸ್ವಾಭಿಮಾನದ ಸಮಾಜವನ್ನು ಕಟ್ಟಿಕೊಳ್ಳಲು ತಮ್ಮ ಜೀವನವನ್ನೇ ಮುಡುಪಾಗಿಟ್ಟರು ಎಂದು ಸಿಎಂ ನೆನೆದರು.