ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ತೀವ್ರತೆ ಹೆಚ್ಚಾಗ್ತಿದೆ. ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮವಾಗಿ ತಜ್ಞರ ಸೂಚನೆ ಮೇರೆಗೆ, ಆರೋಗ್ಯ ಸಿಬ್ಬಂದಿ, ಕೋವಿಡ್ ನಿಯಂತ್ರಣದ ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಇಂದಿನಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದೆ.
ಶಿವಾಜಿನಗರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕಾಲೇಜಿನಲ್ಲಿಂದು ಸಿಎಂ ಬಸವರಾಜ್ ಬೊಮ್ಮಾಯಿ ಬೂಸ್ಟರ್ ಡೋಸ್ ಲಸಿಕಾಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇವರಿಗೆ ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದರು.
ಚಾಲನೆ ನೀಡಿದ ಬಳಿಕ ಮಾತಾನಾಡಿದ ಸಿಎಂ ಬೊಮ್ಮಾಯಿ, ಇಂದಿನಿಂದ 60 ವರ್ಷ ಮೇಲ್ಪಟ್ಟವರಿಗೆ, ಆರೋಗ್ಯ ಹಾಗೂ ಫ್ರಂಟ್ ಲೈನ್ ವರ್ಕರ್ಸ್ಗೆ ಮುನ್ನೆಚ್ಚರಿಕಾ ಲಸಿಕೆ ನೀಡಲಾಗುತ್ತಿದೆ. ಕೋವಿಡ್ನಿಂದ ರಕ್ಷಣೆ ಆಗಬೇಕು. ಇದಕ್ಕೆ ರಕ್ಷಾಕವಚ ಬೇಕಿದ್ದು, ವ್ಯಾಕ್ಸಿನೇಷನ್ ಅಗತ್ಯ. ಮೊದಮೊದಲು ವ್ಯಾಕ್ಸಿನ್ ಬಂದಾಗ ಹಲವು ದೇಶಗಳು ಕಡೆಗಣಿಸಿದ್ದವು, ಆಗ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದನ್ನ ಕಾಣಬಹುದು ಎಂದರು.
ಕೊರೊನಾ ನಿಯಮ ಪಾಲನೆಯಲ್ಲಿ ರಾಜಕೀಯ ಮಾಡಲ್ಲ
ಮೂರನೇ ಅಲೆ ಬಂದಿದ್ದು, ಸರ್ಕಾರದ ನಿಯಮಗಳನ್ನ ಪಾಲಿಸಬೇಕು. ಇದರಲ್ಲಿ ಯಾವುದೇ ರಾಜಕೀಯ ಮಾಡಲ್ಲ ಅಂತ ಪರೋಕ್ಷವಾಗಿ ಬೊಮ್ಮಾಯಿ ಕಾಂಗ್ರೆಸ್ ಪಾದಯಾತ್ರೆಗೆ ತಿರುಗೇಟು ನೀಡಿದರು. ಕೊರೊನಾ ಏರಿಕೆ ಆಗ್ತಿದೆ ಎನ್ನುವಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮವನ್ನ ನಮ್ಮ ಸರ್ಕಾರ ಕೈಗೊಳ್ಳಗುತ್ತಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.
ವಿರೋಧ ಪಕ್ಷ ಅಂದರೆ ಶ್ಯಾಡೋ ಲೀಡರ್ ಅಂತಾರೆ. ನಿಯಮವನ್ನ ಪಾಲಿಸೋದು ಆಡಳಿತ ಪಕ್ಷದ ಕೆಲಸ ಮಾತ್ರ ಅಲ್ಲ, ವಿರೋಧ ಪಕ್ಷವೂ ಪಾಲಿಸಬೇಕು. ಆದರೆ, ಇದನ್ನೆಲ್ಲ ಈಗ ವಿರೋಧ ಪಕ್ಷದವರು ಗಾಳಿಗೆ ತೂರಿದ್ದಾರೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.