ಬೆಂಗಳೂರು: ಕವಿ ಸರ್ವಜ್ಞನ ಹುಟ್ಟೂರು ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಅವರ ತಂದೆ ತಾಯಿಯ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಸಭೆ ಜರುಗಿತು. ಸಭೆಯಲ್ಲಿ ಹಿರೇಕೆರೂರು ಪಟ್ಟಣದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಬಲೂರಿನಲ್ಲಿ ಅವರು ವಾಸವಿದ್ದ ಮನೆಯ ಸ್ಥಳ ಹಾಗೂ ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಅಗತ್ಯವಿರುವ ಖಾಸಗಿ ಜಮೀನು ಖರೀದಿಸಲು ಒಪ್ಪಿಗೆ ನೀಡಲಾಯಿತು.
ಇದರೊಂದಿಗೆ ಸರ್ವಜ್ಞ ಪ್ರಾಧಿಕಾರದಿಂದ 25 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಸಿಎಂ ಬೊಮ್ಮಾಯಿ ಸೂಚಿಸಿದರು. ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಮುಖಾಂತರ ಕೈಗೊಳ್ಳುವಂತೆ ಸೂಚಿಸಿದರು. ಇದರೊಂದಿಗೆ ಸರ್ವಜ್ಞರ ನೆನಪಿಗೆ ರೂಪಿಸುವ ಯೋಜನೆಗಳನ್ನು ಅರ್ಥಪೂರ್ಣವಾಗಿ ಹಾಗೂ ಆಯಾ ವಿಷಯಗಳ ಪರಿಣತರೊಂದಿಗೆ ಸಮಾಲೋಚನೆ ನಡೆಸಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.