ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೊರೊನಾ ತಗುಲಿದ ಹಿನ್ನೆಲೆ, ವರ್ಚುಯಲ್ ಮೂಲಕ ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಓಲ್ಡ್ ಏರ್ ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯದ ಕೋವಿಡ್ ಸ್ಥಿತಿಗತಿಗೆ ಸಂಬಂಧಪಟ್ಟಂತೆ ಹಿರಿಯ ಅಧಿಕಾರಿಗಳ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರೊಂದಿಗೆ ವರ್ಚುಯಲ್ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಕಠಿಣ ನಿಯಮ ಜಾರಿಯಲ್ಲಿದ್ದು, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, ಹಲವೆಡೆ ಶೇ.50ರಷ್ಟು ನಿರ್ಬಂಧ ಅನುಷ್ಠಾನಕ್ಕೆ ತರಲಾಗಿದೆ. ಕಠಿಣ ನಿಯಮ ಜಾರಿ ನಂತರದ ಸ್ಥಿತಿಗತಿ ಕುರಿತು ಇಂದು ಸಿಎಂ ಬೊಮ್ಮಾಯಿ ಅವಲೋಕನ ಮಾಡಲಿದ್ದಾರೆ.
ಇದನ್ನೂ ಓದಿ:ಕೊರೊನಾ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿದೆ. ಹಾಗಾಗಿ ಕೋವಿಡ್ ನಿಯಂತ್ರಣಕ್ಕೆ ಏನೆಲ್ಲ ಕ್ರಮ ಕೈಗೊಳ್ಳಬಹುದು ಸೇರಿದಂತೆ ಕಾಂಗ್ರೆಸ್ ಪಾದಯಾತ್ರೆ ಕಾರಣದಿಂದ ಸ್ಥಳೀಯ ಮಟ್ಟದಲ್ಲಿ ಕೋವಿಡ್ ಸೋಂಕು ಹೆಚ್ಚಳ ಸಾಧ್ಯತೆ ಕುರಿತು ಚರ್ಚಿಸಲಾಗುತ್ತದೆ ಎನ್ನಲಾಗಿದೆ.