ನವದೆಹಲಿ/ಬೆಂಗಳೂರು:ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆ ನೋಟಿಫಿಕೇಷನ್ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತೊಂದು ಪಿಟಿಷನ್ ಮತ್ತು ತಮಿಳುನಾಡಿನ ಕಾನೂನು ಬಾಹಿರ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಬಗ್ಗೆ ಸುಪ್ರೀಂ ಕೋರ್ಟ್ಗೆ ಮತ್ತೊಂದು ಪಿಟಿಷನ್ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತಾರಾಜ್ಯ ಜಲವಿವಾದಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯಲ್ಲಿ ಕಾನೂನು ಮತ್ತು ತಾಂತ್ರಿಕ ತಜ್ಞರ ಜೊತೆ ಮಹತ್ವದ ಸಭೆ ನಡೆಯಿತು. ಜಲ ವಿವಾದಗಳ ಕುರಿತು ಮಹತ್ವದ ಚರ್ಚೆ ನಡೆಸಿ ಸರ್ಕಾರ ಇಡಬೇಕಿರುವ ಹೆಜ್ಜೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಸಭೆ ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಮ್ಮ ಕಾನೂನು ತಂಡದೊಂದಿಗೆ ಸುಪ್ರೀಂಕೋರ್ಟ್ನಲ್ಲಿರುವ ವಿವಿಧ ವಿವಾದಗಳ ಕುರಿತು ನಮ್ಮ ಕಾನೂನು ತಂಡದ ಜೊತೆಯಲ್ಲಿ ಚರ್ಚೆ ನಡೆಸಲಾಗಿದೆ. ನಿನ್ನೆ ನಮ್ಮ ಹಿರಿಯ ನ್ಯಾಯವಾದಿ ಮೋಹನ್ ಕಾತರಿಕಿ ಅವರನ್ನು ಭೇಟಿಯಾಗಿ ಅವರಿಂದ ಎಲ್ಲಾ ವಿವರಗಳನ್ನು ಪಡೆಯಲಾಗಿದೆ. ಶ್ಯಾಮ್ ದಿವಾನ್ ಅವರನ್ನು ಇಂದು ಬೆಳಗ್ಗೆ ಭೇಟಿಯಾಗಿ ಕೆಲವೊಂದು ವಿಷಯಗಳನ್ನು ಪ್ರಸ್ತಾಪ ಮಾಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.
ಇದರ ಜೊತೆಗೆ ನಮ್ಮ ಅಡ್ವೊಕೇಟ್ ಜನರಲ್, ಹಿರಿಯ ವಕೀಲರ ತಂಡದ ಜೊತೆ ಅಂತಾರಾಜ್ಯ ಜಲ ವ್ಯಾಜ್ಯಗಳ ಬಗ್ಗೆ ಚರ್ಚೆ ಮಾಡಿದ್ದೇನೆ. ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಯ ನೋಟಿಫಿಕೇಷನ್ ಬಗ್ಗೆ ತೆಲಂಗಾಣ ಹಾಕಿರುವ ಅರ್ಜಿ ವಿಚಾರಣೆಗೆ ಬರುತ್ತಿದೆ. ನಾವು ಕೂಡ ಕೂಡಲೇ ನ್ಯಾಯಾಧಿಕರಣ ತೀರ್ಪಿನ ನೋಟಿಫಿಕೇಷನ್ ಹೊರಡಿಸಬೇಕು ಎನ್ನುವ ಆಜ್ಞೆಯನ್ನು ಕೊಡಬೇಕು ಎಂದು ಮನವಿ ಮಾಡಲು ನಿರ್ಧರಿಸಿದ್ದೇವೆ. ಈ ಬಗ್ಗೆ ಎಲ್ಲಾ ವಿಚಾರವನ್ನು ಕಾನೂನು ತಂಡದೊಂದಿಗೆ ಚರ್ಚಿಸಲಾಗಿದೆ ಎಂದರು.
ತಮಿಳುನಾಡಿನ ಕಾವೇರಿ-ಗುಂಡಾರ್ ನದಿ ಜೋಡಣೆ ಯೋಜನೆ ಕಾನೂನು ಬಾಹಿರವಾಗಿದೆ. ಅದರ ಬಗ್ಗೆ ಒರಿಜಿನಲ್ ಸೂಟ್ ಹಾಕಿದ್ದೇವೆ. ಅದರ ಲೀಗಲ್ ಇಶ್ಯೂ ಮಾಡಿ ಅದರ ವಿಚಾರಣೆ ಮಾಡಿಸಬೇಕು ಎಂದು ನಿರ್ಧರಿಸಲಾಗಿದೆ. ಮೇಕೆದಾಟು ಯೋಜನೆಯಲ್ಲಿ ಯಾವುದೇ ತಡೆಯಾಜ್ಞೆ ಇಲ್ಲ. ಆದರೆ ತಮಿಳುನಾಡು ಸರ್ಕಾರ ಹಾಕಿರುವ ಅರ್ಜಿ ವಿಚಾರಣೆ ಬಂದಾಗ ನಮ್ಮ ನಿಲುವನ್ನು ಹೇಳಬೇಕಾಗಲಿದೆ. ಮಧುರೈ ಕೋರ್ಟ್ನಲ್ಲಿ ಸ್ಥಳೀಯರೊಬ್ಬರು ಅರ್ಜಿ ಹಾಕಿಕೊಂಡಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ, ಅವರ ವ್ಯಾಪ್ತಿಗೆ ಬರುವುದೂ ಇಲ್ಲ. ಹಾಗಾಗಿ ಆ ಅರ್ಜಿಯಲ್ಲಿ ನಾವು ಪಾರ್ಟಿಯಾಗಿ ಸೇರಿಕೊಂಡು ಆ ಅರ್ಜಿಯನ್ನು ವಜಾಗೊಳಿಸಬೇಕಿದೆ. ಅದಕ್ಕೆ ಅಗತ್ಯ ಕ್ರಮಕ್ಕೆ ನಿರ್ಧರಿಸಲಾಯಿತು ಸ್ಪಷ್ಟನೆ ನೀಡಿದ್ದಾರೆ.
ಮಹದಾಯಿ ವಿವಾದ ಇತ್ಯರ್ಥಕ್ಕೆ ನಿರ್ಧಾರ