ಬೆಂಗಳೂರು:ಕಾಂಗ್ರೆಸ್ ಆಡಳಿತ ಪಕ್ಷವಾಗಿ ಅಲ್ಲ, ವಿರೋಧ ಪಕ್ಷವಾಗಿ ಕೆಲಸ ಮಾಡುವ ನೈತಿಕತೆ ಕಳೆದುಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಕರ್ನಾಟಕ ಮರಾಠ ವೆಲ್‍ಫೇರ್ ಅಸೋಶಿಯೇಷನ್ ವತಿಯಿಂದ ಸದಾಶಿವನಗರದ ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕದ ಬಳಿ ಆಯೋಜಿಸಿರುವ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ ಸಿಎಂ, ಪ್ರತಿಪಕ್ಷವಾಗುವ ನೈತಿಕತೆಯೂ ಕಾಂಗ್ರೆಸ್ಗೆ ಇಲ್ಲ ಎಂದು ಸಿಎಂ ಕಿಡಿಕಾರಿದರು.
ಹಿಜಾಬ್ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಹೊರಗಿನವರಿಂದ ಈ ರೀತಿಯ ಸಮಸ್ಯೆಗಳು ಆಗ್ತಿವೆ. ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಅಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತದೆ. ಕುಂಕುಮ, ತಿಲಕ ಕುರಿತು ಉಂಟಾಗಿರುವ ಸಮಸ್ಯೆಗಳ ಬಗ್ಗೆ ನಾನು ಮಾಹಿತಿ ಪಡೆಯುತ್ತೇನೆ. ಶಾಲಾ - ಕಾಲೇಜುಗಳ ಬಳಿ ಸೌಹಾರ್ದ ವಾತಾವರಣ ಮೂಡಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಅಲ್ಲಿನ ಶಾಲಾ ಕಾಲೇಜು ಆಡಳಿತ ಮಂಡಳಿ ಮಾಡಲಿದೆ ಎಂದರು.
ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ:ಇಂದು ಶಿವಾಜಿ ಜಯಂತಿ ಹಿನ್ನೆಲೆ ಸದಾಶಿವ ನಗರದ ಸ್ಯಾಂಕಿ ಟ್ಯಾಂಕಿ ಆವರಣದಲ್ಲಿನ ಶಿವಾಜಿ ಪ್ರತಿಮೆಗೆ ಸಿಎಂ ಬೊಮ್ಮಾಯಿ ಮಾಲಾರ್ಪಣೆ ಮಾಡಿದರು. ಶಿವಾಜಿ ಇಡೀ ಭಾರತ ರಕ್ಷಣೆ ಮಾಡಿದವರು. ಭಾರತದ ಸ್ವಾಭಿಮಾನದ ಪ್ರತೀಕ.