ಬೆಂಗಳೂರು: ಎರಡು ದಿನಗಳ ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯದ ಕಾನೂನು ಸುವ್ಯವಸ್ಥೆ, ಗೃಹ ಇಲಾಖೆಗೆ ಸಂಬಂಧಪಟ್ಟ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದರು.
ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದ ನಂತರ ಮೂರನೇ ಬಾರಿಗೆ ಸಿಎಂ ದೆಹಲಿಗೆ ತೆರಳಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳ ಕುರಿತು ಮಾತುಕತೆ ನಡೆಸಲು ದೆಹಲಿಗೆ ತೆರಳಿದ್ದು, ಅದರ ಭಾಗವಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಕರ್ನಾಟಕಕ್ಕೆ ಸೀಮಿತವಾಗಿ ಅಫ್ಘಾನಿಸ್ತಾನದ ವಿಚಾರದ ಕುರಿತೂ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಸಂಪುಟ ರಚನೆ ನಂತರ ಇದು ಮೊದಲ ದೆಹಲಿ ಪ್ರವಾಸವಾಗಿದ್ದು, ಸಂಪುಟ ರಚನೆ ನಂತರದ ಬೆಳವಣಿಗೆಗಳು, ಆಕಾಂಕ್ಷಿಗಳ ಅಸಮಾಧಾನ, ರೆಬೆಲ್ ಚಟುವಟಿಕೆ ಕುರಿತು ಅಮಿತ್ ಶಾ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ನಾಳೆ ಜೆಪಿ ನಡ್ಡಾ ಭೇಟಿ ಸಾಧ್ಯತೆ ಇದ್ದು, ಅದಕ್ಕೂ ಮೊದಲು ಸಂಪುಟ ಭರ್ತಿ ಕುರಿತು ಅಮಿತ್ ಶಾ ಜೊತೆ ಮಾತುಕತೆ ನಡೆಸಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯ ನದಿ ವಿವಾದಗಳಿಗೆ ಶೀಘ್ರದಲ್ಲೇ ಪರಿಹಾರ:
ಹಾಗೆಯೇ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ ರಾಜ್ಯ ಯೋಜನೆಗಳ ಕುರಿತು ಚರ್ಚಿಸಿದರು.
ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ರೈತರ ಮಕ್ಕಳಿಗಾಗಿ ಘೋಷಿಸಿರುವ ಸ್ಕಾಲರ್ಶಿಪ್ ಕಾರ್ಯಕ್ರಮ ಉದ್ಘಾಟನೆಗೆ ಕೇಂದ್ರ ಕೃಷಿ ಸಚಿವರನ್ನು ಸಿಎಂ ಆಹ್ವಾನಿಸಿದರು. ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬೊಮ್ಮಾಯಿ ಅವರು ಈ ಯೋಜನೆ ಘೋಷಿಸಿದ್ದರು. ಸೆ.5ರಂದು ಈ ಕಾರ್ಯಕ್ರಮ ನಡೆಯಲಿದೆ.
ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿಯಾಗಿ, ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಚರ್ಚಿಸಿದರು. ಸಮಸ್ಯೆ ಪರಿಹರಿಸುವ ಬಗ್ಗೆ ಕೇಂದ್ರ ಸಚಿವರು ಧನಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಎಂ ತಿಳಿಸಿದರು.
ಇನ್ನು ತಮಿಳುನಾಡು, ಕಾವೇರಿ ನದಿಗೆ ಜೋಡಣೆ ಯೋಜನೆ ರೂಪಿಸಿಕೊಂಡಿರುವುದು ಕಾನೂನುಬಾಹಿರ. ಈ ಬಗ್ಗೆ ಕೇಂದ್ರ ಸಚಿವರು ಮಾಹಿತಿ ಕೇಳಿದ್ದು, ಶೀಘ್ರದಲ್ಲಿ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ನದಿ ವಿವಾದಗಳಲ್ಲಿ ರಾಜ್ಯ ಪರ ನಿಲ್ಲುವಂತೆ ಕೇಳಿಕೊಂಡಿದ್ದೇನೆ. ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂದು ಸಿಎಂ ಭರವಸೆ ನೀಡಿದರು.
ರಾಜ್ಯ ಜಲ ಯೋಜನೆಗಳಿಗೆ ಸಂಬಂಧಿತ ಕಾನೂನಿನ ಸಲಹೆಗಾರರ ಜೊತೆ ಗುರುವಾರ ಸಭೆ ನಡೆಸುತ್ತೇನೆ. ಹಾಗೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಆರೋಗ್ಯ ಸಚಿವ ಮನ್ಶುಖ್ ಮಾಂಡವಿಯಾ ಅವರನ್ನು ಇಂದು ಸಿಎಂ ಭೇಟಿಯಾಗಲಿದ್ದಾರೆ.