ಬೆಂಗಳೂರು: ಹೊರ ರಾಜ್ಯದಿಂದ ಬಂದು ರಾಜ್ಯದಲ್ಲಿ ನೆಲೆಸಿದ್ದರೂ ಸ್ಥಳೀಯರೊಂದಿಗೆ ಬೆರೆತಿರುವ ಜೈನ ಸಮಾಜ ನಮ್ಮ ಸಮಾಜದಿಂದ ಕೆಲವು ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಅವರ ವಿಶ್ವಾಸ ಉಳಿಸಿಕೊಳ್ಳುವ ರೀತಿ ನಾವು ಆಡಳಿತ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿನ್ನೆ ಮಾಧವ ನಗರದ ಕಲ್ಪತರು ಅಪಾರ್ಟ್ಮೆಂಟ್ ಬಳಿ ಇರುವ ಕಲ್ಪತರು ಮುನಿಸುವರ್ತ್ ಸ್ವಾಮಿ ದೇವಸ್ಥಾನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಅರವಿಂದ್ ಸಾಗರ್ ಸುರೀಜಿ ಆಶೀರ್ವಾದ ತೆಗೆದುಕೊಂಡರು. ನಂತರ ಮುನಿಸುವರ್ತ್ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿಎಂ ಅವರಿಗೆ ದುರ್ಗಾದೇವಿ ಕಂಚಿನ ಪ್ರತಿಮೆ ನೀಡಲಾಯಿತು. ಈ ವೇಳೆ, ಮುಂದಿನ ಬಾರಿಯೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಬರಬೇಕು ಎಂದು ಜೈನ ನಾಯಕರು ಒತ್ತಾಯ ಮಾಡಿದರು. ಆಗ ವಿಷಯ ಬದಲಾಯಿಸಿ ಬೇರೆ ಮಾತನಾಡಿ ಎಂದು ಸಿಎಂ ನಗುತ್ತಲೇ ಹೇಳಿದರು.
ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಾಡಿನ ಸಮಸ್ಯೆ, ಜನರ ಸಂಕಷ್ಟ ದೂರವಾಗಲಿ. ನಾಡು ಅಭಿವೃದ್ಧಿಯಾಗಿ ಸಮೃದ್ಧವಾಗಲಿ ಎಂದು ದೇವರಲ್ಲಿ ಕೇಳಿಕೊಂಡಿದ್ದೇನೆ. ಜೈನ ಸಮಾಜ ಬಹಳ ಪರೋಪಕಾರಿ ಸಮಾಜ. ದೂರದ ರಾಜಸ್ಥಾನ, ಗುಜರಾತ್ನಿಂದ ಬಂದರೂ ಸಹ ಯಾವ ಊರಿಗೆ ಬರುತ್ತಾರೋ ಅದೇ ಊರಿನವರೇ ಆಗಿ ಬಿಡುತ್ತಾರೆ. ಅಲ್ಲಿನ ಜನರ ಜೊತೆ ಬೆರೆತು ಅಲ್ಲಿನ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸುತ್ತಾರೆ. ಜೈನ ಸಮಾಜ ಸಂಸ್ಕೃತಿ ಇರುವಂತಹ ಸಮಾಜ. ಅವರ ಮೂಲತತ್ವ ಅಹಿಂಸೆಯಾಗಿದೆ. ಅವರು ಬಹಳ ಮಾನವೀಯತೆಯಿಂದ ನಡೆದುಕೊಳ್ಳಲು ಅದು ಕೂಡ ಕಾರಣ ಎಂದರು.
ವಿಶ್ವಾಸ ಉಳಿಸಿಕೊಳ್ಳುತ್ತೇವೆ: ಭಗವಾನ್ ಮಹಾವೀರರು ತ್ಯಾಗದ ಪ್ರತೀಕವಾಗಿದ್ದಾರೆ. ಬಹಳ ದೊಡ್ಡ ಸಾಮ್ರಾಜ್ಯದ ಅರಸರಾಗಿದ್ದ ಮಹಾವೀರರು, ಸಮಾಜದಲ್ಲಿರುವ ಎಲ್ಲ ಕ್ಷೋಭೆ ನೋಡಿ ಸರ್ವಸ್ವವನ್ನು ಬಿಟ್ಟು ಲೋಕಕಲ್ಯಾಣಕ್ಕಾಗಿ ಸಮರ್ಪಣೆ ಮಾಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರು. ಎಲ್ಲವನ್ನು ತ್ಯಾಗ ಮಾಡಿ ಹೋದರು. ಉಟ್ಟ ಬಟ್ಟೆಯನ್ನೂ ಬಿಟ್ಟು ತಪಸ್ಸಿಗೆ ಕೂರುತ್ತಾರೆ. ಈ ರೀತಿಯ ನಡವಳಿಕೆ ಸಂಸ್ಕೃತಿ ಬಹಳ ಅಪರೂಪ. ಹೀಗಾಗಿ ಅವರೆಲ್ಲ ಮಹಾತ್ಮರಾಗಿದ್ದಾರೆ.