ಬೆಂಗಳೂರು: ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಬೇಧ-ಭಾವವಿಲ್ಲದೇ ನಾವು ಕೆಲಸ ಮಾಡುತ್ತೇವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ಸಂಘಟನೆಗಳು, ಸಂಘ-ಸಂಸ್ಥೆಗಳ ಜೊತೆ ಮಾತುಕತೆ ನಡೆಸಿ ನ್ಯಾಯಾಲಯಗಳು ನೀಡಿರುವ ತೀರ್ಪನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಆಜಾನ್ ವಿವಾದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸಿಎಂ ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ಹೇಳಿಕೆಗಳಿಂದ ಸಮಸ್ಯೆಗಳ ಪರಿಹಾರ ಆಗುವುದಿಲ್ಲ. ಅವುಗಳ ಬಗ್ಗೆ ಈಗಾಗಲೇ ಹಲವಾರು ವಿಚಾರಗಳು ಬಂದಿವೆ. ಇವೆಲ್ಲ ಹಿಂದಿನಿಂದ ಬಂದಿರುವ ವಿಚಾರಗಳು. ಈಗ ಹೊಸದಾಗಿ ಬಂದಿಲ್ಲ. ಎಲ್ಲವು ಹಳೆಯ ಆದೇಶಗಳೇ ಆಗಿವೆ. ಹೈಕೋರ್ಟ್ನ ತೀರ್ಪುಗಳು ಕೂಡ ಹಳೆಯವೇ. ನಾವು ಯಾವುದೇ ಹೊಸ ಆದೇಶಗಳನ್ನು ಮಾಡಿಲ್ಲ. ಎಲ್ಲವನ್ನು ಗಮನದಲ್ಲಿರಿಸಿಕೊಂಡು, ಯಾವುದೇ ಸಮಾಜ ಆಗಲಿ, ಯಾವುದೇ ಸಂಘಟನೆ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದೇ ಶಾಂತಿ-ಸುವ್ಯವಸ್ಥೆ ಕಾಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ನಾವು ಕೈಗೊಳ್ಳುತ್ತೇವೆ ಎಂದರು.
ಎಲ್ಲರನ್ನು ವಿಶ್ವಾಸಕ್ಕೆ ಪಡೆಯುತ್ತೇವೆ : ಆಜಾನ್ ಕುರಿತು ಈಗಾಗಲೇ ಹೈಕೋರ್ಟ್ ಆದೇಶವಿದೆ. ಯಾಕೆ ಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದೆ. ಆಜಾನ್‌ಗೆ ಡೆಸಿಬಲ್ ಪ್ರಮಾಣ ನಿಗದಿಗೊಳಿಸಿದೆ. ಡೆಸಿಬಲ್ ತಪಾಸಣೆ ಮಾಡುವ ಯಂತ್ರ ಖರೀದಿ ಮಾಡುವ ಹಾಗೂ ಹೈಕೋರ್ಟ್ ಆದೇಶಗಳನ್ನು ಹಂತ ಹಂತವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಮಾಡಬೇಕಿರುವ ಕೆಲಸ ಇದು. ಹಲವಾರು ಸಂಘಟನೆಗಳೊಂದಿಗೆ, ಪೊಲೀಸ್ ಠಾಣೆ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಈಗಾಗಲೇ ಸಭೆಗಳನ್ನು ಮಾಡಿದ್ದೇವೆ. ಮುಂದೆಯೂ ಸಭೆಗಳನ್ನು ಮಾಡಿ ಕ್ರಮಕೈಗೊಳ್ಳುತ್ತೇವೆ ಎಂದರು.