ಬೆಂಗಳೂರು: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಘೋಷಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕರು ತಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂಬ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ರಾಜಕೀಯ ಎಷ್ಟು ಕೆಳ ಮಟ್ಟಕ್ಕಿಳಿದಿದೆ ಎನ್ನುವುದು ಗೊತ್ತಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ಕಾಂಗ್ರೆಸ್ ಹೋರಾಟದಿಂದ ಸಿಕ್ಕ ಜಯ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೋರಾಟ ಮಾಡಿದ ರೈತ ಸಂಘಟನೆಗಳು ಯಾವುದೇ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿರಲಿಲ್ಲ. ಅವರು ರಾಜಕೀಯ ಪಕ್ಷವನ್ನು ದೂರ ಇಟ್ಟಿದ್ದರು. ಹೀಗಾಗಿ ಕಾಂಗ್ರೆಸ್ ಇದನ್ನು ತಮ್ಮ ಹೋರಾಟದ ಜಯ ಎಂದು ತಮ್ಮ ಬೆನ್ನು ತಟ್ಟಿಕೊಳ್ಳೋ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
'ನಮಗೆ ಹಿನ್ನೆಡೆಯಾಗಲ್ಲ'
ಇಷ್ಟು ವಿಳಂಬವಾಗಿ ಕಾಯ್ದೆ ವಾಪಸ್ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಹಿಂದೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು. ಆ ಬಳಿಕ ವಾಪಸ್ ಪಡೆದಿತ್ತು. ಆದ್ರೆ ಕೃಷಿ ಕಾಯ್ದೆಗಳ ಹಿಂಪಡೆಯುವಿಕೆ ನಿಜವಾಗಲೂ ಪ್ರಜಾಪ್ರಭುತ್ವದ ಜೀವಂತಿಕೆಯ ನಿರ್ಣಯವಾಗಿದೆ. ಕಾಯ್ದೆಗಳನ್ನು ವಾಪಸ್ ಪಡೆಯಲಾಗುತ್ತಿದೆ. ಕಾಯ್ದೆ ಬಗ್ಗೆ ಮುಂದೆ ಚರ್ಚೆ ಆಗಲಿ. ಕಾಯ್ದೆ ವಾಪಸ್ ಪಡೆದಿರುವುದರಿಂದ ನಮಗೆ ಹಿನ್ನೆಡೆ ಆಗುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆ ರಾಜಕೀಯ ಪ್ರೇರಿತ ಹೋರಾಟ ಅಂತ ಬಿಜೆಪಿ ಹಾಗೂ ನೀವೇ ಹೇಳಿಕೆ ನೀಡಿದ್ರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ರಾಜಕೀಯ ಪಕ್ಷಗಳ ಪ್ರೇರಿತ ಹೋರಾಟ ಅಂತ ಹೇಳಿರಲಿಲ್ಲ. ಎಂಎಸ್ಪಿ ಹಿಂದಿರುವ ಕೆಲವೊಂದು ಏಜೆನ್ಸಿಗಳು ಇದನ್ನು ಮಾಡಿವೆ ಅಂತ ಹೇಳಿದ್ದೇನೆ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ:Repeal of 3 farm laws:''ಅನ್ನದಾತ ಮತ್ತು ಕಾಂಗ್ರೆಸ್ ಹೋರಾಟಕ್ಕೆ ಸಿಕ್ಕ ಜಯ''- ಡಿಕೆಶಿ ವಿಶ್ಲೇಷಣೆ
ಕೃಷಿ ಕಾಯ್ದೆ ವಾಪಸ್ ಪಡೆದು ರೈತರ ಮಾತಿಗೆ ಮೋದಿ ಅವರು ಮನ್ನಣೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾವುದಾದ್ರು ಕಾಯ್ದೆ ಜಾರಿಗೆ ಬಂದಾಗ ಪರ ವಿರೋಧ ಅಭಿಪ್ರಾಯಗಳು ಇರುತ್ತದೆ. ರೈತರ ಮಾತಿಗೆ ಮನ್ನಣೆ ನೀಡಿ ಈಗ ಕಾಯ್ದೆ ವಾಪಸ್ ಪಡೆದಿದ್ದಾರೆ. ರೈತರಿಗೆ ಸ್ಪಂದಿಸುವ ಕೆಲಸವನ್ನು ಪ್ರಧಾನಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.